ಮಂಡ್ಯ : ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಯಶಸ್ವಿಯಾಗಿ ನಡೆಸಿದ “ಆಪರೇಷನ್ ಸಿಂಧೂರ” ಎಂಬ ರಹಸ್ಯ ಸೇನಾ ಕಾರ್ಯಾಚರಣೆ ಬಳಿಕ, ದೇಶದ ಯೋಧರ ಪರವಾಗಿ ಧಾರ್ಮಿಕ ಲೋಕವೂ ಧನ್ಯತೆಯ ಸೂಚನೆ ನೀಡುತ್ತಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯೆಯಾಗಿ ಕರ್ನಾಟಕ ಸರ್ಕಾರವು ರಾಜ್ಯದ ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ದೇವಾಲಯಗಳಲ್ಲಿ ಯೋಧರ ಹೆಸರಿನಲ್ಲಿ ವಿಶೇಷ ಪೂಜೆಯನ್ನು ನಡೆಸಲು ಆದೇಶಿಸಿದೆ.
ಸಚಿವ ರಾಮಲಿಂಗಾರೆಡ್ಡಿ ಅವರು ಭಾರತೀಯ ಸೇನೆಗೆ ಶುಭ ಹಾರೈಸಿದ್ದಾರೆ ಮತ್ತು ಯೋಧರಿಗೆ ಒಳಿತಾಗಲೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಲು ಸೂಚಿಸಿದ್ದಾರೆ. ಈ ಹಿನ್ನೆಲೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನಿಮಿಷಾಂಭ ದೇಗುಲದಲ್ಲಿ ಸೈನಿಕರ ಹೆಸರಲ್ಲಿ ಪೂಜೆ ಸಲ್ಲಿಸಲಾಗಿದೆ.
ಇಂದು ಮುಂಜಾನೆ ಭಾರತೀಯ ಯೋಧರ ಕ್ಷೇಮಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದ ಮುಖ್ಯ ಅರ್ಚಕರು ಸೈನಿಕರ ಹೆಸರಿನಲ್ಲಿ ವಿಶೇಷ ಸಂಕಲ್ಪವನ್ನು ಮಾಡಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಿಗೆ ಯೋಧರ ಸುರಕ್ಷತೆ, ಶಕ್ತಿ ಮತ್ತು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.














