ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲೆಂದು ತಾಯಿ ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದ ಮಹಿಳಾ ಕಾಂಗ್ರೆಸ್ ಸಮಿತಿ ಇದೀಗ ಇಂದು ಹರಕೆಯನ್ನು ತೀರಿಸಿದೆ.
ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಮೆಟ್ಟಿಲಿನ ಮೂಲಕ ಚಾಮುಂಡಿ ಬೆಟ್ಟವನ್ನು ಹತ್ತಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜ, ರಾಜ್ಯ ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಕಾಂಗ್ರೆಸ್ ಮಹಿಳೆಯರು ಭಾಗಿಯಾಗಿದ್ದರು. ಈಡುಗಾಯಿ ಹೊಡೆದು ಪೂಜೆ ಸಲ್ಲಿಸಿ ನೆಟ್ಟ ಡಿಸೋಜ ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ನಂತರ ತಾಯಿ ಚಾಮುಂಡೇಶ್ವರಿಗೆ ಬಾಗಿನ ಅರ್ಪಣೆ ಮಾಡಿದರು.
ಬಳಿಕ ಮಾತನಾಡಿದ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮಾರ್ಚ್ ತಿಂಗಳಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಮಹಿಳಾ ಕಾಂಗ್ರೆಸ್ ಸಮಾವೇಶ ನಡೆಯುವ ಸಂದರ್ಭದಲ್ಲಿ ನಾವು ಎಲ್ಲರೂ ಸೇರಿ ದೇವಿಗೆ ಹರಕೆ ಹೊತ್ತಿದ್ದೆವು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿನ್ನ ಸನ್ನಿಧಿಗೆ ಬಂದು ಬಾಗಿನ ಸೇವೆ ಮಾಡುತ್ತೇವೆ ಎಂದು ಹರಕೆ ಹೊತ್ತಿದ್ದೆವು. ಅದರಂತೆ ಇಂದು ತಾಯಿಗೆ ಹರಕೆ ತೀರಿಸಲು ಮೆಟ್ಟಿಲು ಏರಿ ಹೋಗುತ್ತಿದ್ದೇವೆ. ರಾಜ್ಯದ ನಾನಾ ಭಾಗಗಳಿಂದ ಮಹಿಳಾ ಕಾಂಗ್ರೆಸ್ ಸದಸ್ಯರು ಆಗಮಿಸಿದ್ದಾರೆ. ಇದು ತೋರ್ಪಡಿಕೆಗಾಗಿ ಮಾಡುತ್ತಿರುವುದಲ್ಲ. ತಾಯಿ ಚಾಮುಂಡೇಶ್ವರಿ ಆಣೆಯಾಗಿಯೂ ಹರಕೆ ಹೊತ್ತಿದ್ದೆವು. ನಾಡಿನಲ್ಲಿ ಸುಭೀಕ್ಷೆಯಿಂದ ಸರ್ಕಾರ ನಡೆಯಲಿ ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲಿ ಎಂದು ತಾಯಿಯಲ್ಲಿ ಕೇಳಿಕೊಳ್ಳುತ್ತೇನೆ ಎಂದು ಬೆಟ್ಟ ಏರುತ್ತಲೇ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.