ಮನೆ ದೇವಸ್ಥಾನ ಶ್ರೀ ಚಾಮುಂಡೇಶ್ವರಿ ಶ್ರೀಕ್ಷೇತ್ರದ ವಿಶೇಷತೆ

ಶ್ರೀ ಚಾಮುಂಡೇಶ್ವರಿ ಶ್ರೀಕ್ಷೇತ್ರದ ವಿಶೇಷತೆ

0

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿರುವ ಶ್ರೀ ಚಾಮುಂಡೇಶ್ವರಿ ಶ್ರೀಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಾರೆ.

ಚಾಮುಂಡಿ ಬೆಟ್ಟದಲ್ಲಿರುವ ಈ ದೇವಾಲಯ ಚೌಕಾಕೃತಿಯಲ್ಲಿ ನಿರ್ಮಾಣವಾಗಿದೆ. ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದ್ದು ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಚಾಮುಂಡೇಶ್ವರಿ ದೇವಾಲಯದ ಮಹಾದ್ವಾರದ ಮೇಲೆ ಸುಂದರವಾದ ‘ಗೋಪುರ’ ಹಾಗೂ ಗರ್ಭ ಗುಡಿಯ ಮೇಲೆ ‘ವಿಮಾನ’ ಶಿಖರಗಳಿವೆ. ಏಳು ಅಂತಸ್ತುಗಳ ಗೋಪುರ 19ನೇ ಶತಮಾನದಲ್ಲಿ ನಿರ್ಮಿತವಾಗಿದ್ದು ಪಿರಮಿಡ್‌ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿದೆ.

ಇಲ್ಲಿ ಚಾಮುಂಡೇಶ್ವರಿ ಮಹಿಷಾಸುರ ಮರ್ದಿನಿ ದುರ್ಗಾದೇವಿಯ ರೌದ್ರಾವತಾರದಲ್ಲಿ ವಿರಾಜಮಾನವಾಗಿರುವ ವಿಗ್ರಹ ಇದೆ. ಮಹಿಷಾಸುರ ಎಂಬ ರಾಕ್ಷಸನ ಉಪಟಳ ಸಹಿಸಲು ಅಸಾಧ್ಯವಾದಾಗ ದೇವತೆಗಳೆಲ್ಲಾ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಮೊರೆ ಹೋಗುತ್ತಾರೆ.

ನಂತರ ದೇವತೆಗಳು ತಮ್ಮ ಶಕ್ತಿಯನ್ನು ಒಟ್ಟುಗೂಡಿಸಿ ದೇವಿಯನ್ನು ಸೃಷ್ಟಿಸುತ್ತಾರೆ. ಆ ದೇವಿ ಉಗ್ರ ಸ್ವರೂಪವನ್ನು ತಾಳಿ ರಾಕ್ಷಸನನ್ನು ಸಂಹಾರ ಮಾಡುತ್ತಾಳೆ. ದುಷ್ಟಶಕ್ತಿಯ ಸಂಹಾರವಾದ ಪ್ರತೀಕವಾಗಿ ನವರಾತ್ರಿ ಹಬ್ಬವನ್ನು ಆಚರಿಸಲಾಗುವುದು.
ಇಲ್ಲಿರುವ ದೇವಿಯ ವಿಗ್ರಹವನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಪುರಾಣ ಹೇಳುತ್ತದೆ. 1827ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಪುರಾತನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಮಹಾದ್ವಾರದ ಮೇಲೆ ದೊಡ್ಡ ಗೋಪುರವನ್ನು ಕಟ್ಟಿಸಿ, ‘ಸಿಂಹ ವಾಹನ’ವನ್ನು ಕೊಡುಗೆಯಾಗಿ ನೀಡುತ್ತಾರೆ. ರಥೋತ್ಸವ ಸಂದರ್ಭದಲ್ಲಿ ಈ ಸಿಂಹ ವಾಹನದಲ್ಲಿ ನಾಡ ದೇವತೆಯನ್ನು ಕೂರಿಸಿ ಮೆರವಣಿಗೆ ಮಾಡಲಾಗುವುದು.
ದೇವಾಲಯದ ಪ್ರವೇಶ ದ್ವಾರದಲ್ಲಿ ಮಹಿಷಾಸುರನ ಬೃಹತ್ ಪ್ರತಿಮೆಯೂ ಇದೆ. ಈ ಮಹಿಷಾಸುರ ಪ್ರತಿಮೆಯು ಒಂದು ಕೈಯಲ್ಲಿ ಹಾವು ಮತ್ತು ಇನ್ನೊಂದು ಕೈಯಲ್ಲಿ ಕತ್ತಿಯನ್ನು ಹಿಡಿದಿದೆ.

ನೀವು ಇಲ್ಲಿ ನಂದಿಯ ಪ್ರತಿಮೆಯನ್ನು ಕಾಣಬಹುದು. ಇದು ದೇಶದ ಅತಿದೊಡ್ಡ ನಂದಿಯ ಪ್ರತಿಮೆ ಆಗಿದೆ. ಇದು ೧೫ ಅಡಿ ಎತ್ತರ ಮತ್ತು ೨೫ ಅಡಿ ಅಗಲವನ್ನು ಹೊಂದಿದ್ದು ತನ್ನ ಕುತ್ತಿಗೆಯ ಸುತ್ತ ವ್ಯಾಪಕವಾದ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆ.

ಈ ದೇವಾಲಯಕ್ಕೆ ರಾಜ್ಯ-ಹೊರ ರಾಜ್ಯದ ಭಕ್ತರಲ್ಲದೆ ವಿದೇಶಿಯರು ಭೇಟಿ ನೀಡುತ್ತಾರೆ.

ಹಿಂದಿನ ಲೇಖನಸಿವಿಲ್​ ಕೋರ್ಟ್​ನಲ್ಲಿ ಸ್ಫೋಟ, ಪೊಲೀಸ್​ ಅಧಿಕಾರಿಗೆ ಗಾಯ
ಮುಂದಿನ ಲೇಖನಮಗುವಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ