ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಭದ್ರತೆ ಕಲ್ಪಿಸುವ ವಿಶೇಷ ರಕ್ಷಣಾ ಗುಂಪಿನ (ಎಸ್ ಪಿಜಿ) ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ ಅವರು ಹರಿಯಾಣದ ಗುರುಗ್ರಾಮ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
ಕಳೆದ ಕೆಲ ಸಮಯದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಬುಧವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಿನ್ಹಾ ಅವರು 1987 ರ ಬ್ಯಾಚ್ ಕೇರಳ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದರು. ಅವರು ಎಸ್ ಪಿಜಿ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು, ಸಿನ್ಹಾ ಅವರು ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಬಳಿಕ 2016 ರಿಂದ ಎಸ್ ಪಿಜಿ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ವಹಿಸಿದ್ದ ಸಿನ್ಹಾ ಪ್ರಧಾನಿ ಮತ್ತು ರಾಷ್ಟ್ರಪತಿಗಳ ವಿರುದ್ಧ ಇಮೇಲ್ ಕೊಲೆ ಬೆದರಿಕೆ ಮತ್ತು ಲೆಟರ್ ಬಾಂಬ್ ಪ್ರಕರಣದಂತಹ ಪ್ರಮುಖ ಪ್ರಕರಣಗಳನ್ನು ಸಾಬೀತುಪಡಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ಸಿನ್ಹಾ ನಗರ ಪೊಲೀಸ್ ಕಮಿಷನರ್ ಆಗಿದ್ದಾಗ ನಗರದಲ್ಲಿ ಕ್ರೈಂ ಸ್ಟಾಪರ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಸಿನ್ಹಾ ಅವರು ಗೌರವಾನ್ವಿತ ಸೇವೆಗಾಗಿ ರಾಷ್ಟ್ರಪತಿಗಳ ಪದಕವನ್ನೂ ಪಡೆದಿದ್ದಾರೆ.
ಸಿನ್ಹಾ ಅವರು ಈ ವರ್ಷದ ಮೇ 30 ರಂದು ನಿವೃತ್ತರಾಗುವ ಒಂದು ದಿನದ ಮೊದಲು, ಪಿಎಂ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಅವರನ್ನು ಇನ್ನೂ ಒಂದು ವರ್ಷಕ್ಕೆ ಮರು ನೇಮಕ ಮಾಡುವ ಪ್ರಸ್ತಾವನೆಯನ್ನು ಅನುಮೋದಿಸಿತ್ತು.