ಮನೆ ಕ್ರೀಡೆ ಏಷ್ಯಾಕಪ್ ನ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಗೆ  5 ವಿಕೆಟ್ ಗಳ ಜಯ

ಏಷ್ಯಾಕಪ್ ನ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಗೆ  5 ವಿಕೆಟ್ ಗಳ ಜಯ

0

ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆದರೆ ನಿರೀಕ್ಷಿತ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ಆರಂಭಿಕ ಆಟಗಾರ ತಂಝಿದ್ ಹಸನ್ (0) ಶೂನ್ಯಕ್ಕೆ ಔಟಾದರೆ, ಮೊಹಮ್ಮದ್ ನಯಿಮ್ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಕಣಕ್ಕಿಳಿದ ನಜ್ಮುಲ್ ಶಾಂಟೊ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ನಾಯಕ ಶಕೀಬ್ ಅಲ್ ಹಸನ್ ಕೇವಲ 5 ರನ್ ಗಳಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ತೌಹಿದ್ ಹೃದೊಯ್ 20 ರನ್     ಗಳಿಸಿದರೆ, ಮುಶ್ಫಿಕುರ್ ರಹೀಮ್ 13 ರನ್ ಗಳಿಸಲಷ್ಟೇ ಶಕ್ತರಾದರು.ಇದಾಗ್ಯೂ ಮತ್ತೊಂದೆಡೆ ನಜ್ಮುಲ್ ಶಾಂಟೊ ಅರ್ಧಶತಕ ಪೂರೈಸಿದರು.

ಈ ಮೂಲಕ ತಂಡದ ಮೊತ್ತವನ್ನು 100 ರನ್ ಗಳ  ಗಡಿದಾಟಿಸಿದರು. 122 ಎಸೆತಗಳನ್ನು ಎದುರಿಸಿದ ಶಾಂಟೊ 7 ಫೋರ್ ಗಳೊಂದಿಗೆ 89 ರನ್ ಬಾರಿಸಿ ಮಹೀಶ್ ತೀಕ್ಷಣ ಎಸೆತದಲ್ಲಿ ಬೌಲ್ಡ್ ಆದರು. ಇದರ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಲಂಕಾ ಬೌಲರ್ಗಳು ಬಾಂಗ್ಲಾದೇಶ್ ತಂಡವನ್ನು 42.4 ಓವರ್ಗಳಲ್ಲಿ 164 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

165 ರನ್ ಗಳ ಸುಲಭ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ವೇಗಿ ತಸ್ಕಿನ್ ಅಹ್ಮದ್ ಯಶಸ್ವಿಯಾಗಿದ್ದರು. ಮೂರನೇ ಓವರ್ನ ಮೊದಲ ಎಸೆತದಲ್ಲಿ ದಿಮುತ್ ಕರುಣರತ್ನೆ (1) ವಿಕೆಟ್ ಪಡೆದರು.

ಬಳಿಕ ಬಂದ ಕುಸಾಲ್ ಮೆಂಡಿಸ್ (5) ಶಕೀಬ್ ಅಲ್ ಹಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಯಾದ ಸದೀರ ಸಮರವಿಕ್ರಮ ಹಾಗೂ ಚರಿತ್ ಅಸಲಂಕಾ 78 ರನ್ ಗಳ ಜೊತೆಯಾಟವಾಡಿದರು. ಇದಾದ ಬಳಿಕ 77 ಎಸೆತಗಳಲ್ಲಿ 6 ಫೋರ್ ಗಳೊಂದಿಗೆ 54 ರನ್ ಬಾರಿಸಿ ಸದೀರ ಸ್ಟಂಪ್ ಔಟ್ ಆಗಿ ನಿರ್ಗಮಿಸಿದರು.

ಧನಂಜಯ ಡಿಸಿಲ್ವಾ (2) ಶಕೀಬ್ ಅಲ್ ಹಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಮತ್ತೊಂದೆಡೆ ಅಸಲಂಕಾ 85 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ 92 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ ಗಳೊಂದಿಗೆ ಅಜೇಯ 62 ರನ್ ಬಾರಿಸುವ ಮೂಲಕ ಚರಿತ್ ಅಸಲಂಕಾ 39 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಶ್ರೀಲಂಕಾ ತಂಡವು 39 ಓವರ್ ಗೆ 165 ರನ್ ಗಳಿಸುವ ಮೂಲಕ  5 ವಿಕೆಟ್ ಗಳ ಜಯ ಸಾಧಿಸಿತ್ತು.