ದೇವರುಗಳಲ್ಲೇ ಗಣಪ ಪ್ರಥಮ ವಂದಿಪ. ಹೀಗಾಗಿ ಪ್ರತಿಯೊಂದು ಊರಿನಲ್ಲೂ ಪ್ರತಿ ದೇವಾಲಯದಲ್ಲೂ ಗಣಪ ಇದ್ದೇ ಇರುತ್ತಾನೆ.
ಗಣಪತಿಗಾಗಿಯೇ ಪ್ರತ್ಯೇಕ ದೇವಾಲಯಗಳೂ ಇವೆ. ಇಂಥ ದೇವಾಲಯಗಳ ಪೈಕಿ ಬೆಂಗಳೂರಿನ ಮಲ್ಲೇಶ್ವರ 9ನೇ ಕ್ರಾಸ್, ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀಮಹಾಗಣಪತಿ ದೇವಾಲಯವೂ ಒಂದು. ಮಹಾ ಮಹಿಮಾನ್ವಿತನಾದ ಗಣಪತಿಗಾಗಿಯೇ ಇಲ್ಲಿ ಭವ್ಯ ದೇವಾಲಯ ನಿರ್ಮಿಸಲಾಗಿದೆ. ಈ ಗಣಪನ ಪೂಜೆ ಮಾಡುವುದರಿಂದ ಎಲ್ಲ ಕಾರ್ಯಗಳೂ ಮನದಲ್ಲಿ ಅಂದುಕೊಂಡು ಕೋರಿಕೆಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ಇಲ್ಲಿರುವ ಗಣಪನಿಗೆ ಭಕ್ತರು ಇಷ್ಟಾರ್ಥಸಿದ್ಧ ಮಹಾಗಣಪತಿ ಎಂದು ಕರೆಯುತ್ತಾರೆ.
ಎಂಬತ್ತು ವರ್ಷಗಳ ಹಿಂದೆ ಅಂದರೆ 1930ರಲ್ಲಿ ಗಿರಿಯಪ್ಪ ಗೌಡರ ಮುಖಂಡತ್ವದಲ್ಲಿ ನಿರ್ಮಾಣವಾದ ಪುಟ್ಟ ಗುಡಿ ಇಂದು ಬೃಹತ್ ಭವ್ಯ ದೇವಾಲಯವಾಗಿ ಮಾರ್ಪಟ್ಟಿದೆ. ಒಮ್ಮೆ ಗಿರಿಯಪ್ಪಗೌಡರಿಗೆ ದೇವರೊಂದು ಸಿಕ್ಕಿದಂತೆ, ಅವರು ದೇವಾಲಯ ನಿರ್ಮಿಸಿದಂತೆ ಕನಸು ಬಿದ್ದಿದಂತೆ, ಇದನ್ನು ಸ್ನೇಹಿತರ ಬಳಿ ಹೇಳಿಕೊಂಡಾಗ ಹಲವರು ನಕ್ಕರು. ಆದರೆ, ಕೆಲವು ತಿಂಗಳುಗಳ ಬಳಿಕ ಅವರಿಗೆ ನೆಲಮಂಗಲದ ಬಳಿ ಕೆರೆಯಲ್ಲಿ ಗಣಪತಿ ವಿಗ್ರಹ ದೊರಕಿತಂತೆ. ಆಗ ಗೌಡರು ಬೆಂಗಳೂರಿನ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಪುಟ್ಟ ಗುಡ್ಡದ ಮೇಲೆ ಈ ವಿಗ್ರಹ ಸ್ಥಾಪಿಸಿ ಗುಡಿ ಕಟ್ಟಿಸಿದರು.
1930ನೇ ಇಸವಿ ಶ್ರಾವಣ ಮಾಸದ ವರಮಹಾಲಕ್ಷ್ಮೀ ಹಬ್ಬದ ಶುಕ್ರವಾರ ಇಲ್ಲಿ ದೇವರ ಪ್ರತಿಷ್ಠಾಪನೆ ನೆರವೇರಿತು 1964ರಲ್ಲಿ ಶೃಂಗೇರಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಇಲ್ಲಿ ವಿಮಾನ ಗೋಪುರದ ಪೂಜೆ ನೆರವೇರಿತು ಎಂದು ಸ್ಥಳೀಯರು ಹೇಳುತ್ತಾರೆ.
ಈ ಗಣಪನಿಗೆ ಹರಕೆ ಹೊತ್ತರೆ ಬೇಡಿದ ವರ ನೀಡುತ್ತಾನೆ ಎಂಬುದು ಭಕ್ತರ ನಂಬಿಕೆ. ಬೆಂಗಳೂರು ಉತ್ತರ ಭಾಗದಲ್ಲಿ ಸಂಕಷ್ಟಹರ ಚತುರ್ಥಿಯ ಪೂಜೆಯನ್ನು ಆರಂಭಿಸಿದ ಮೊದಲ ದೇವಾಲಯ ಎಂಬ ಹೆಗ್ಗಳಿಕೆಯೂ ಈ ದೇವಾಲಯಕ್ಕಿದೆ.
ಈ ಗಣಪನಿಗೆ ಭಕ್ತರು ಕಡುಬಿನ ಹಾರ, ಕೋಡುಬಳೆ ಹಾರ, ವಡೆ ಹಾರ, ಕಜ್ಜಾಯದ ಹಾರ, ಚಕ್ಕುಲಿ ಹಾರ ಇತ್ಯಾದಿ ಖಾದ್ಯಗಳಿಂದಲೂ ಅಲಂಕಾರ ಮಾಡಿಸುತ್ತಾರೆ. ಬಳಿಕ ಇದನ್ನು ಪ್ರಸಾದ ರೂಪದಲ್ಲಿ ಹಂಚುತ್ತಾರೆ. ಹರಕೆ ಹೊತ್ತು ಕೆಲವು ಭಕ್ತರು ತಮ್ಮ ಇಷ್ಟಾರ್ಥ ಈಡೇರಿದ ತರುವಾಯ ಇಲ್ಲಿ ಮೆಟ್ಟಲಿಗೊಂದು ಕಾಯಿಯಂತೆ ಈಡುಗಾಯಿ ಒಡೆಯುತ್ತಾರೆ.
ನಿತ್ಯವೂ ಇಲ್ಲಿ ಪೂಜೆ ಪುನಸ್ಕಾರಗಳು ಜರುಗುತ್ತವೆ. ಪ್ರತಿ ತಿಂಗಳು ಹುಣ್ಣಿಮೆಯ ದಿನ ಶ್ರೀಸತ್ಯನಾರಾಯಣ ಪೂಜೆ ಹಾಗೂ ಚೌತಿಯ ದಿನ ಸಂಕಷ್ಟಹರ ಗಣಪತಿ ವ್ರತ ಜರುಗುತ್ತದೆ. ಅಂದು ವಿಶೇಷ ಅಭಿಷೇಕ, ಅರ್ಚನೆ ಹಾಗೂ ಅಲಂಕಾರಗಳು ನಡೆಯುತ್ತವೆ.
ದೇವಾಲಯದ ಪ್ರಕಾರದಲ್ಲಿ ಆಂಜನೇಯಸ್ವಾಮಿ, ನವಗ್ರಹ, ಶ್ರೀ ಸತ್ಯನಾರಾಯಣ, ಪಂಚಲಿಂಗ ಹಾಗೂ ತಾಯಿ ಬನಶಂಕರಿ ದೇವರ ಗುಡಿಗಳೂ ಇವೆ.
ಗಿರಿಯಪ್ಪಗೌಡರು ದೇವಾಲಯ ನಿರ್ಮಿಸಿದ ಬಳಿಕ ಶ್ರೀ ನಟೇಶ್ ಅಯ್ಯರ್ ಅವರು ಸನ್ಮಾರ್ಗ ಪ್ರವರ್ತಕ ಸಂಘವನ್ನು ಸ್ಥಾಪಿಸಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. 1980ರಿಂದ ದೇವಾಲಯ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಶಿವಲಿಂಗಕ್ಕೆ ಇಲ್ಲಿ ವಿಭೂತಿಯ ಅಭಿಷೇಕ ನಡೆಯುತ್ತದೆ. ಅದನ್ನು ನೋಡುವುದೇ ಒಂದು ಸೌಭಾಗ್ಯ ಎಂದರೂ ತಪ್ಪಲ್ಲ.