ಮನೆ ಅಪರಾಧ ಶ್ರೀರಂಗಪಟ್ಟಣ: ಪರಿಶಿಷ್ಟರಿಗೆ ಕ್ಷೌರಕ್ಕೆ ನಿರಾಕರಣೆ- ಅಂಗಡಿಗಳನ್ನು ಮುಚ್ಚಿದ ಕ್ಷೌರಿಕರು

ಶ್ರೀರಂಗಪಟ್ಟಣ: ಪರಿಶಿಷ್ಟರಿಗೆ ಕ್ಷೌರಕ್ಕೆ ನಿರಾಕರಣೆ- ಅಂಗಡಿಗಳನ್ನು ಮುಚ್ಚಿದ ಕ್ಷೌರಿಕರು

0

ಶ್ರೀರಂಗಪಟ್ಟಣ(Srirangapattana): ಪರಿಶಿಷ್ಟರಿಗೆ ಕ್ಷೌರ ಮಾಡಲು ನಿರಾಕರಿಸಿ ತಾಲ್ಲೂಕಿನ ಮಹದೇವಪುರ ಹಾಗೂ ಅಕ್ಕಪಕ್ಕದ ಊರುಗಳ 10 ಕ್ಷೌರದ ಅಂಗಡಿಗಳನ್ನು ಕ್ಷೌರಿಕರು ಸಾಮೂಹಿಕವಾಗಿ ಮುಚ್ಚಿದ್ದಾರೆ.

ಮಹದೇವಪುರದ 7, ಅಕ್ಕಪಕ್ಕದ ಊರುಗಳಲ್ಲಿನ 3 ಅಂಗಡಿಗಳು ಕಳೆದ 20 ದಿನಗಳಿಂದ ಮುಚ್ಚಿವೆ. ಇದರಿಂದಾಗಿ ಗ್ರಾಮದ ಜನರು ಕ್ಷೌರಕ್ಕಾಗಿ ಅರಕೆರೆ, ಮಂಡ್ಯ ಕೊಪ್ಪಲು ವೃತ್ತ ಹಾಗೂ ಪಟ್ಟಣ ಪ್ರದೇಶಗಳಿಗೆ ತೆರಳುವ ಅನಿವಾರ್ಯತೆ ಉಂಟಾಗಿದೆ.

ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ನೇತೃತ್ವದಲ್ಲಿ ನ.5ರಂದು ಕುಂದುಕೊರತೆ ಸಭೆ ನಡೆದಿತ್ತು. ಆಗ ಕೆಲವರು, ಮಹದೇವಪುರದಲ್ಲಿ ನಮಗೆ ಕ್ಷೌರ ಮಾಡುತ್ತಿಲ್ಲ ಎಂದು ದೂರು ನೀಡಿದ್ದರು. ನಂತರ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್‌ ಈ ಬಗ್ಗೆ ನ.6ರಂದು ಅರಕೆರೆ ಪೊಲೀಸ್‌ ಠಾಣೆಗೆ ದೂರನ್ನೂ ನೀಡಿದ್ದರು. ಗ್ರಾಮಕ್ಕೆ ತೆರಳಿದ್ದ ಪೊಲೀಸರು ಕ್ಷೌರ ಮಾಡುವಂತೆ ಮನವೊಲಿಸಲು ಯತ್ನಿಸಿದ್ದರು. ಇದಕ್ಕೆ ಒಪ್ಪದ ಕ್ಷೌರಿಕರು ಅಂಗಡಿಗಳನ್ನೇ ಬಂದ್‌ ಮಾಡಿದ್ದಾರೆ.

ಬಹಿರಂಗವಾಗಿ ಅಸ್ಪೃಶ್ಯತೆ ಆಚರಣೆ: ಮಹದೇವಪುರದ ಕ್ಷೌರಿಕರು ಚನ್ನಹಳ್ಳಿ, ಬಿದರಹಳ್ಳಿ ಗ್ರಾಮದ ಪರಿಶಿಷ್ಟರು ಬಂದರೆ ಯಾವುದೇ ತಕರಾರಿಲ್ಲದೆ ಕ್ಷೌರ ಮಾಡುತ್ತಾರೆ. ಆದರೆ, ತಮ್ಮದೇ ಊರಿನ ಪರಿಶಿಷ್ಟರಿಗೆ ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದೆ. ಬಹಿರಂಗವಾಗಿ ಅಸ್ಪೃಶ್ಯತೆ ಆಚರಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್‌ ಆರೋಪಿಸಿದರು.

ನ.14ರಂದು ಗ್ರಾಮಕ್ಕೆ ಬಂದ ಸಿಪಿಐ ಪುನೀತ್‌ ಅವರು ಪರಿಶಿಷ್ಟರಿಗೆ ಕ್ಷೌರ ಮಾಡಿಸಿದ್ದರು. ಮಾರನೇ ದಿನದಿಂದ ಅಂಗಡಿಗಳು ಮತ್ತೆ ಬಂದ್ ಆಗಿವೆ ಎಂದರು.

ಡಿವೈಎಸ್ಪಿ ಸಂದೇಶ ಕುಮಾರ್‌ ನೇತೃತ್ವದಲ್ಲಿ ನ.23ರಂದು ಸಭೆ ನಡೆಸಲಾಗಿದ್ದು, ಕ್ಷೌರಿಕರ ಮನವೊಲಿಸುವಂತೆ ಗ್ರಾಮದ ಇತರ ವರ್ಗದವರಿಗೆ ಸೂಚಿಸಿದ್ದಾರೆ. ಇದಕ್ಕೆ ಗ್ರಾಮಸ್ಥರು ಮೂರು ದಿನ ಕಾಲಾವಕಾಶ ಕೇಳಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದವರು ತಿಳಿಸಿದರು.

ಕ್ರಮಕ್ಕೆ ಸೂಚಿಸಿದ ತಹಶೀಲ್ದಾರ್: ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಘಟನೆ ಕುರಿತು ಪ್ರತಿಕ್ರಿಯಿಸಿ, ದೂರು ಬಂದ ಬಳಿಕ ಗ್ರಾಮಕ್ಕೆ ತೆರಳಿ ಪರಿಶಿಷ್ಟರಿಗೆ ಕ್ಷೌರ ಮಾಡಿಸಿದ್ದೆ. ಮತ್ತೆ ಈಗ ಆ ಅಂಗಡಿಗಳು ಮುಚ್ಚಿವೆ ಎಂಬ ಮಾಹಿತಿ ಬಂದಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಅರಕೆರೆ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌’ಗೆ ತಿಳಿಸಿದ್ದೇನೆ ಎಂದರು.

ಹಿಂದಿನ ಲೇಖನಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಮಹಾರಾಷ್ಟ್ರ ಗಡಿ ವಿವಾದ: ಕರ್ನಾಟಕ ಸಾರಿಗೆ ಬಸ್’ಗೆ ಕಪ್ಪು ಮಸಿ ಬಳಿದ ಪ್ರತಿಭಟನಾಕಾರರು