ಶ್ರೀರಂಗಪಟ್ಟಣ (Srirangapatana)- ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ 100 ಕ್ಕೂ ಹೆಚ್ಚು ಗಿಳಿಗಳು ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣದ ನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ಬೃಹತ್ ಅರಳಿ ಮರ ಧರೆಗುರುಳಿದ ಪರಿಣಾಮ 100 ಕ್ಕೂ ಹೆಚ್ಚು ಗಿಳಿಗಳು ಮೃತಪಟ್ಟಿವೆ. ಪಕ್ಷಿ ಪ್ರಿಯರು ಮೃತ ಗಿಳಿಗಳ ಕಳೇಬರವನ್ನು ಮಣ್ಣು ಮಾಡಿ ಪೂಜೆ ಸಲ್ಲಿಸಿದ್ದಾರೆ.
ತಾಲೂಕಿನ ನಾನಾ ಕಡೆ 500 ಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿವೆ. 10 ಎಕರೆ ಬಾಳೆ ತೋಟಕ್ಕೆ ಹಾನಿಯಾಗಿದೆ. ತಾಲೂಕಿನ ಪಾಲಹಳ್ಳಿ ಗ್ರಾಮವೊಂದರಲ್ಲಿಯೇ 400 ಕ್ಕೂ ಹೆಚ್ಚು ತೆಂಗಿನ ಮರಗಳು ಉರುಳಿ ಬಿದ್ದಿವೆ. ಬಾಳೆ ಗಿಡಗಳು ನೆಲ ಕಚ್ಚಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾಲಹಳ್ಳಿ ಹೊರ ವಲಯದಲ್ಲಿ, ಪಶ್ಚಿಮವಾಹಿನಿ ರಸ್ತೆ ಸೇರಿದಂತೆ ನಾನಾ ಕಡೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸರಬರಾಜು ವ್ಯತ್ಯಯವಾಗಿದೆ.
ಶುಕ್ರವಾರ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ತಾಲೂಕಿನ ಪಾಲಹಳ್ಳಿಯಲ್ಲಿ ನಾಲ್ಕೈದು ಮನೆಗಳ ಚಾವಣಿ ಹಾರಿ ಹೋಗಿದೆ. ತೆಂಗಿನ ಮರಗಳು ಧರೆಗುರುಳಿವೆ, ಬಾಳೆ ತೋಟ ನೆಲಕಚ್ಚಿದೆ. ಈ ಸಂಬಂಧ ಸಂಬಂಧಪಟ್ಟ ಗ್ರಾಮ ಲೆಕ್ಕಿಗರು ವರದಿ ನೀಡಿದ್ದಾರೆ. ಪರಿಶೀಲನೆ ನಡೆಸಲಾಗವುದು, ಸರಕಾರಕ್ಕೆ ಕಳುಹಿಸಿಲಾಗುವುದು ಎಂದು ತಹಸೀಲ್ದಾರ್ ಶ್ವೇತ ಎನ್.ರವೀಂದ್ರ ತಿಳಿಸಿದ್ದಾರೆ.