ಮನೆ ದೇವಸ್ಥಾನ ಮಲ್ಲೇಶ್ವರದ ಶ್ರೀ ವೇಣುಗೋಪಾಲ ಸ್ವಾಮಿ

ಮಲ್ಲೇಶ್ವರದ ಶ್ರೀ ವೇಣುಗೋಪಾಲ ಸ್ವಾಮಿ

0

ಬೆಂಗಳೂರು ಮಹಾನಗರದ ಪುರಾತನ ಪ್ರದೇಶಗಳಲ್ಲಿ ಮಲ್ಲೇಶ್ವರವೂ ಒಂದು. ಮಲ್ಲೇಶ್ವರ ಧಾರ್ಮಿಕರಿಗೆ ಮೆಚ್ಚಿನ ತಾಣ. ಇಲ್ಲಿರುವ ಅನೇಕ ಪುರಾತನ ದೇವಾಲಯಗಳ ಪೈಕಿ 10 ಮತ್ತು 11ನೇ ಕ್ರಾಸ್ ನಡುವೆ ಇರುವ ಶ್ರೀವೇಣುಗೋಪಾಲಸ್ವಾಮಿ ದೇವಾಲಯ ಪ್ರಮುಖವಾದದ್ದು.

Join Our Whatsapp Group

1902ರಲ್ಲಿ ನಿರ್ಮಾಣವಾದ ಈ ಭವ್ಯ ದೇವಾಲಯದ ಇತಿಹಾಸ ಕ್ರಿಸ್ತಶಕ 997ನದಷ್ಟು ಹಳೆಯದು ಎನ್ನುತ್ತಾರೆ ದೇವಾಲಯದ ಅರ್ಚಕರು. ಸಾವಿರ  ವರ್ಷಗಳ ಹಿಂದೆ ಚೋಳ ದೊರೆಗಳು ಪೂಜಿಸುತ್ತಿದ್ದ ಈ ವೇಣುಗೋಪಾಲಸ್ವಾಮಿ ವಿಗ್ರಹವನ್ನು ತಿರುಕುಡಲೂರ್ ನಿಂದ ತರಲಾಯಿತೆಂದು ಅವರು ಹೇಳುತ್ತಾರೆ.

ವಿಶಾಲ ಪ್ರಾಕಾರವನ್ನು ಹೊಂದಿರುವ ಈ ದೇವಾಲಯಕ್ಕೆ ಭವ್ಯವಾದ ರಾಜಗೋಪುರವಿದೆ. ಪ್ರಸ್ತುತ ಹೊಸ ಗೋಪುರ ನಿರ್ಮಾಣ ಕಾರ್ಯ ನಡೆಯುತ್ತಿದೆ.  ಪ್ರಧಾನ ಗರ್ಭಗೃಹದಲ್ಲಿ ಶಂಖ, ಚಕ್ರ ಗದಾಧಾರಿಯಾಗಿ, ಮುಡಿಯಲ್ಲಿ ನವಿಲುಗರಿಯ ಅಲಂಕಾರದಿಂದ ಶೋಭಿಸುತ್ತಿರುವ ಹಾಗೂ ಕೈಯಲ್ಲಿ ಕೊಳಲು ಹಿಡಿದ ಸುಂದರ ವೇಣುಗೋಪಾಲ ಕೃಷ್ಣಸ್ವಾಮಿಯ ಮೂರ್ತಿಯಿದೆ. ಪಾದದ ಬಳಿ ಸುಂದರ ಹಸುವಿನ ವಿಗ್ರಹವಿದೆ. ಶ್ರೀಕೃಷ್ಣನ ಕಣ್ಣಿನಲ್ಲಿರುವ ಕಾಂತಿ ಎಲ್ಲರನ್ನೂ ಸಮ್ಮೋಹನಗೊಳಿಸುತ್ತದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಸಿಂಹಾಸನಾರೂಢರಾದ ದಿನದ ಜ್ಞಾಪಕಾರ್ಥವಾಗಿ ಈಗಿರುವ ಭವ್ಯ ದೇವಾಲಯವನ್ನು ನಿರ್ಮಾಣ ಮಾಡಿದರೆಂದು ಇಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ಅದೇ ಕಾಲಾವಧಿಯಲ್ಲಿ ಶ್ರೀರಂಗಪಟ್ಟಣದ ದಿವಾನರಾಗಿ ಪೂರ್ಣಯ್ಯನವರು ಸಹ ದೇವಾಲಯದ ಅಭಿವೃದ್ಧಿ ಶ್ರಮಿಸಿದ್ದಾರೆ.

ಈ ದೇವಾಲಯದಲ್ಲಿ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿಯ ಎಡಭಾಗದಲ್ಲಿ ಶ್ರೀನಂಬಿ ನಾರಾಯಣನ ಸುಂದರ ಮೂರ್ತಿಯಿದ್ದು, ಇದು ಜಕ್ಕಣಾಚಾರಿ ಕಡೆದ ವಿಗ್ರಹ ಎಂದು ಹೇಳಲಾಗುತ್ತದೆ. ಕರ್ನಾಟಕದಲ್ಲಿರುವ ಎರಡು ನಂಬಿ ನಾರಾಯಣ ಸ್ವಾಮಿಯ ಮೂರ್ತಿಗಳ ಪೈಕಿ ಇದೂ ಒಂದಾಗಿದೆ.  ಮತ್ತೊಂದು ಮೇಲುಕೋಟೆ ಬಳಿಯ ತೊಂಡನೂರಿನಲ್ಲಿದೆ.

ದೇವಾಲಯದಲ್ಲಿರುವ ದರ್ಪಣ ಮಂದಿರ ಮನಮೋಹಕವಾಗಿದೆ. ಷಟ್ಕೋಣಾಕಾರದಲ್ಲಿ ನಿರ್ಮಿಸಲಾಗಿರುವ ಇದರಲ್ಲಿ ಶೇಷಶಯನನಾದ ಕೃಷ್ಣಮೂರ್ತಿಯನ್ನು 275 ಪ್ರತಿಬಿಂಬಗಳಲ್ಲಿ ನೋಡುವುದೇ ಒಂದು ಸೊಬಗು.

10ನೇ ಕ್ರಾಸ್ ನಿಂದ ದೇವಾಲಯಕ್ಕೆ ಇರುವ ಪ್ರವೇಶ ದ್ವಾರದಲ್ಲಿ ಈಗ ಹೊಸದಾಗಿ ರಾಜಗೋಪುರ ನಿರ್ಮಾಣ ಕಾರ್ಯ ನಡೆದಿದೆ. ಇದನ್ನು ಪ್ರವೇಶಿಸಿ ಒಳ ಹೋಗುತ್ತಿದ್ದಂತೆ ಒಳ ಪ್ರಾಕಾರದ ದೇವಾಲಯ ಮನಸೆಳೆಯುತ್ತದೆ. ಕಲ್ಲುಗಳಿಂದ ನಿರ್ಮಿಸಲಾದ ದೇವಾಲಯದ ಮೇಲ್ಭಾಗದಲ್ಲಿ ಗಾರೆಯ ಗೋಪುರಗಳಿದ್ದು ಅದರಲ್ಲಿ ನಾರಾಯಣ, ಲಕ್ಷ್ಮೀ, ಗೋಪಾಲಕೃಷ್ಣನ ಪ್ರತಿಮೆಗಳಿವೆ.  ಪ್ರಾಕಾರದ ಉತ್ತರದಲ್ಲಿ ದೀಪಸ್ತಂಭವಿದ್ದು, ವಿಶೇಷ ದಿನಗಳಲ್ಲಿ ಇಲ್ಲಿ ದೀಪಾರಾದನೆ ನಡೆಯುತ್ತದೆ. ದೇಗುಲದ ಎದುರು 12 ಅಡಿ ಎತ್ತರದ ಗರುಡಗಂಭವಿದೆ. ಸನಿಹದಲ್ಲೇ ಬಲಿಹರಣ ಪೀಠವಿದ್ದು ಇದರ ಮೇಲೆ ಅಷ್ಟ ದಿಕ್ಪಾಲಕರಿಗೆ ಬಲಿಯನ್ನದ ನೈವೇದ್ಯ ಮಾಡಲಾಗುತ್ತದೆ.

ದೇವಾಲಯದ ಪಕ್ಕದಲ್ಲಿರುವ ಮತ್ತೊಂದು ಗರ್ಭಗುಡಿಯಲ್ಲಿ ಇತ್ತೀಚೆಗೆ (5 ವರ್ಷಗಳ ಹಿಂದೆ) ಅಂಬೆಗಾಲು ಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮಳೂರಿನ ಅಂಬೆಗಾಲು ಕೃಷ್ಣನ ಮಾದರಿಯಲ್ಲದೆ. ಪ್ರತಿವರ್ಷ ದೇವಾಲಯದಲ್ಲಿ ಕೃಷ್ಣಾಷ್ಟಮಿ ವಿಜೃಂಭಣೆಯಿಂದ ನಡೆಯುತ್ತದೆ. ಫಾಲ್ಗುಣ ಮಾಸದ ರೋಹಿಣಿ ನಕ್ಷತ್ರದಲ್ಲಿ ಪ್ರತಿ ವರ್ಷ ಇಲ್ಲಿ ಬ್ರಹ್ಮೋತ್ಸವ ನಡೆಯುತ್ತದೆ. ಆಶ್ವಯುಜ ಮಾಸದಲ್ಲಿ ನವರಾತ್ರಿಯ ಬಳಿಕ ಪವಿತ್ರೋತ್ಸವ ಜರುಗುತ್ತದೆ.

ವಿಶಿಷ್ಟ್ಯಾದ್ವೈತ ಸಂಪ್ರದಾಯದ ರೀತ್ಯ ಎಲ್ಲ ಆಳ್ವಾರ್ ಆಚಾರ್ಯರುಗಳ  ತಿರುನಕ್ಷತ್ರಗಳು ಪ್ರತಿ ತಿಂಗಳು ತಪ್ಪದೆ ಜರುಗುತ್ತದೆ. ಆಚಾರ್ಯತ್ರಯರ ಪೈಕಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರ ನಕ್ಷತ್ರದ ದಿನ ದಶಾವತಾರ ಉತ್ಸವ ಜರುಗುತ್ತದೆ. ವೈಕುಂಠ ಏಕಾದಶಿಯ ದಿನ ಇಲ್ಲಿ 10 ದಿನಗಳ ಕಾಲ ಅಪರೂಪದ ಅಧ್ಯಯನೋತ್ಸವ ನಡೆಯುತ್ತದೆ. ದೇವಾಲಯದ ಪ್ರವೇಶ ದ್ವಾರದಲ್ಲಿ ವಿಶಿಷ್ಟ ಶೈಲಿಯ ಜಯ ವಿಜಯರ ಮೂರ್ತಿಯಿದೆ. ಈಗ ಹೊಸದಾಗಿ ಜಯವಿಜಯರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಕಾರ್ಯವೂ ನಡೆದಿದೆ.

ಪ್ರಧಾನ ಗರ್ಭಗೃಹದಲ್ಲಿರುವ ವೇಣುಗೋಪಾಲಸ್ವಾಮಿ ಬಲ ಬದಿಯಲ್ಲಿರುವ ಮತ್ತೊಂದು ಗರ್ಭಗೃಹದಲ್ಲಿ ರುಕ್ಮಿಣಿ ದೇವಿಯ ಸುಂದರ ಪ್ರತಿಮೆಯಿದೆ. ನವರಂಗದ ಹೊರಗೆ ಪಶ್ಚಿಮದಲ್ಲಿರುವ ಗರ್ಭಗೃಹದಲ್ಲಿ ಕೈಯಲ್ಲಿ ಶುಕವನ್ನು ಹಿಡಿದ ಆಂಡಾಳ್ ವಿಗ್ರಹವಿದೆ. ಪಕ್ಕದಲ್ಲಿ ಇರುವ ಮತ್ತೊಂದು ಗುಡಿಯಲ್ಲಿ ಹನುಮದ್ ಸಮೇತ ಸೀತಾರಾಮ ಲಕ್ಷ್ಮಣರ ಮೂರ್ತಿಯಿದೆ.  ಈ ದೇವಾಲಯದಲ್ಲಿರುವ ಎಲ್ಲ ದೇವರುಗಳಿಗೆ ವೈಷ್ಣವ ಹಾಗೂ ಪಂಚರಾತ್ರಾಗಮ ಪದ್ಧತಿಯಂತೆ ಪೂಜೆ ನಡೆಯುತ್ತದೆ. ಮದುವೆಯಾಗಿ ಬಹುಕಾಲ ಮಕ್ಕಳಿಲ್ಲದವರು ಇಲ್ಲಿ ಹರಕೆ ಹೊರುತ್ತಾರೆ. ನಂತರ ಸಂತಾನ ಭಾಗ್ಯವಾದ ಬಳಿಕ ಇಲ್ಲಿ  ದೇವರಿಗೆ ಶಕ್ತ್ಯಾನುಸಾರ ತೊಟ್ಟಿಲು ಕಟ್ಟುತ್ತಾರೆ. ಪ್ರಸ್ತುತ ಈ ದೇವಾಲಯ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಹೆಚ್ಚಿನ ಮಾಹಿತಿಗೆ ದೇವಾಲಯದ ಪ್ರಧಾನ ಅರ್ಚಕರಾದ ವೇದಬ್ರಹ್ಮ, ರಾಷ್ಟ್ರೀಯ ರತ್ನ ಮಾಧವ ನರಸಿಂಹ ಭಟ್ಟರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ – 9448061803. 080-23312649.