ಬೆಂಗಳೂರು: 2025ರ ಎಸ್ಎಸ್ಎಲ್ಸಿ ಪರೀಕ್ಷೆ-2ರ ಫಲಿತಾಂಶ ಇಂದು ಪ್ರಕಟವಾಗಿದ್ದು, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸಿರುವ ಅತ್ಯುತ್ತಮ ಸಾಧನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶವು ರಾಜ್ಯ ಸರ್ಕಾರ ಜಾರಿಗೆ ತಂದ ಮೂರು ಪರೀಕ್ಷಾ ಪದ್ಧತಿಯ ಯಶಸ್ಸಿಗೆ ಸ್ಪಷ್ಟ ಸಾಕ್ಷಿ ಎಂದು ಅವರು ಹೇಳಿದ್ದಾರೆ.
ಈ ಬಾರಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಉತ್ತೀರ್ಣತೆ ಪ್ರಮಾಣ ಶೇ. 36.65 ಆಗಿದ್ದು, ಇದು ಅನುದಾನಿತ ಮತ್ತು ಖಾಸಗಿ ಶಾಲೆಗಳಿಗಿಂತ ಹೆಚ್ಚಿನದು. “ಇದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೊಡಗಿಸಿಕೊಂಡ ಶ್ರಮದ ಫಲವಾಗಿದೆ” ಎಂದು ಸಚಿವರು ಸ್ಪಷ್ಟಪಡಿಸಿದರು.
ಶಿಕ್ಷಣ ಇಲಾಖೆಯ ಮೂರು ಪರೀಕ್ಷಾ ಪಠ್ಯಕ್ರಮವು ವಿದ್ಯಾರ್ಥಿಗಳ ಭವಿಷ್ಯ ಸುಧಾರಣೆಗೆ ಪೂರಕವಾಗಿದೆ. ಈ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಕಡಿಮೆಮಾಡಿ, ಫಲಿತಾಂಶ ಉತ್ತಮಪಡಿಸಿಕೊಳ್ಳಲು ಅವಕಾಶ ನೀಡುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತಕ್ಷಣವೇ ಮುಂದಿನ ವ್ಯಾಸಂಗ ಆರಂಭಿಸುವ ಅವಕಾಶ ಲಭಿಸುತ್ತಿದೆ.
ಅಂಕಿ-ಅಂಶಗಳಲ್ಲಿ ಸಾಧನೆ:
- 11,818 ವಿದ್ಯಾರ್ಥಿಗಳು ಪರೀಕ್ಷೆ-2 ಮೂಲಕ ಫಲಿತಾಂಶ ಉತ್ತಮಪಡಿಸಿಕೊಳ್ಳಲು ನೋಂದಾಯಿಸಿದ್ದರು.
- ಇವರಲ್ಲಿ 6,635 ವಿದ್ಯಾರ್ಥಿಗಳು (ಶೇ. 56.14) ತಮ್ಮ ಪಾಸಾದ ಅಂಕಗಳನ್ನು ಸುಧಾರಿಸಿಕೊಂಡಿದ್ದಾರೆ.
- ಪರೀಕ್ಷೆ-2ನಲ್ಲಿ ನಾಲ್ಕು ವಿದ್ಯಾರ್ಥಿಗಳು 625/625 ಅಂಕಗಳನ್ನು ಗಳಿಸಿದ್ದು, ಇವರಲ್ಲಿ ಒಬ್ಬ ಸರ್ಕಾರಿ ಶಾಲೆಯ ವಿದ್ಯಾರ್ಥಿ.
- ಒಟ್ಟು 87,330 ವಿದ್ಯಾರ್ಥಿಗಳು ಪರೀಕ್ಷೆ-2 ಮೂಲಕ ಉತ್ತೀರ್ಣರಾಗಿದ್ದಾರೆ, ಇದರಿಂದ ಅವರು ಈಗಲೇ ಮುಂದಿನ ಶಿಕ್ಷಣ ಹಂತಕ್ಕೆ ಸಾಗಲು ಅವಕಾಶ ಪಡೆದಿದ್ದಾರೆ.
ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಪರಿಹಾರ ತರಗತಿಗಳನ್ನು ನಡೆಸಲಾಗಿದ್ದು, ಇದರಿಂದ ಅವರ ಅಂಕಗಳಲ್ಲೂ ಸುಧಾರಣೆ ಕಂಡುಬಂದಿದೆ.
ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರು ಹಾಗೂ ಶಾಲಾ ಅಧ್ಯಾಪಕರು ಈ ಯೋಜನೆ ಯಶಸ್ವಿಯಾಗಲು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇದರಿಂದ ಎಸ್ಎಸ್ಎಲ್ಸಿ ಪರೀಕ್ಷೆ-2 ಯಶಸ್ವಿಯಾಗಿ ನಡಿದಿದೆ.














