ಬೆಂಗಳೂರು: ಮಾ. 28 ರಿಂದ ಏ.11ರವರೆಗೆ ರಾಜ್ಯಾದ್ಯಂತ ‘ಎಸ್‌ಎಸ್‌ಎಲ್‌ಸಿ’ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ನಡೆಸಿದೆ.
ಈ ಬಾರಿ ಒಟ್ಟು 15,387 ಶಾಲೆಗಳಿಂದ 8,73,846 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 4,52,732 ಗಂಡು ಮಕ್ಕಳು ಹಾಗೂ 4,21,110 ಹೆಣ್ಣು ಮಕ್ಕಳು, 4 ತೃತೀಯ ಲಿಂಗಿ ವಿದ್ಯಾರ್ಥಿಗಳು ಸೇರಿದ್ದಾರೆ. ಅಲ್ಲದೇ ಸುಮಾರು 5,307 ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.ರಾಜ್ಯದ 5,717 ಸರ್ಕಾರಿ ಶಾಲೆಗಳು, 3,412 ಅನುದಾನಿತ ಹಾಗೂ 6,258 ಅನುದಾನ ರಹಿತ ಶಾಲೆಗಳು ಪರೀಕ್ಷೆಗೆ ನೋಂದಾಯಿಸಿವೆ. ಇದರಲ್ಲಿ ಸರ್ಕಾರಿ ಶಾಲೆಯ 3,76,685 ವಿದ್ಯಾರ್ಥಿಗಳು, ಅನುದಾನಿತ ಶಾಲೆಯ 2,23,032 ವಿದ್ಯಾರ್ಥಿಗಳು ಹಾಗೂ ಅನುದಾನ ರಹಿತ 2,74,129 ವಿದ್ಯಾರ್ಥಿಗಳು ಇದ್ದಾರೆ. ರಾಜ್ಯಾದ್ಯಂತ 3,444 ಪರೀಕ್ಷಾ ಕೇಂದ್ರಗಳಿದ್ದು ಇದರಲ್ಲಿ 3,275 ಸಾಮಾನ್ಯ ಕೇಂದ್ರಗಳು ಹಾಗೂ 169 ಖಾಸಗಿ ಕೇಂದ್ರಗಳಾಗಿವೆ.
ಪರೀಕ್ಷಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಲು ವಿವಿಧ ಸ್ತರದ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 45,289 ಪರೀಕ್ಷಾ ಕೊಠಡಿಗಳಿದ್ದು, 3,444 ಮುಖ್ಯ ಅಧೀಕ್ಷಕರು, 377 ಉಪ ಮುಖ್ಯ ಅಧೀಕ್ಷಕರ ನಿಯೋಜನೆ ಮಾಡಲಾಗಿದೆ. 3,444 ಪ್ರಶ್ನೆ ಪತ್ರಿಕೆಗಳ ಅಭಿರಕ್ಷಕರು, ಕೊಠಡಿ ಮೇಲ್ವಿಚಾರಣೆಗಾಗಿ 49,817 ಮಂದಿ, ಸ್ಥಾನಿಕ ಜಾಗೃತ ದಳದ 3,444, ಮೊಬೈಲ್ ಸ್ಟಕ್ಡ್ 3,444 ನಿಯೋಜನೆ ಮಾಡಲಾಗಿದೆ. 3,444 ಪೊಲೀಸರು, ಪ್ರಶ್ನೆ ಪತ್ರಿಕೆ ವಿತರಣೆಗೆ 1,266 ಮಂದಿಯನ್ನ ನೇಮಕ ಮಾಡಲಾಗಿದೆ.ಮಕ್ಕಳಿಗಾಗಿ ಸಹಾಯ ವಾಣಿ: ಪರೀಕ್ಷಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡು ಹಿಡಿಯುವ ಹಾಗೂ ಭಯ ರಹಿತವಾಗಿ ಆತ್ಮಸೈರ್ಯ ತುಂಬಲು ಮಂಡಳಿಯಲ್ಲಿ ಬೆಳಗ್ಗೆ 09.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನುರಿತ ವಿಷಯಾಧರಿತ ಶಿಕ್ಷಕರಿಂದ ಸಹಾಯ ವಾಣಿ ಏರ್ಪಡಿಸಲಾಗಿದೆ. ಇನ್ನು ಪರೀಕ್ಷೆ ದಿನಗಳಂದು ನಿಯಂತ್ರಣ ಕೊಠಡಿಯಾಗಿ ಬೆಳಗ್ಗೆ 10 ರಿಂದ 2 ರವರೆಗೆ ಕಾರ್ಯ ನಿರ್ವಹಿಸಲಾಗುತ್ತದೆ.
ಸಿಸಿಟಿವಿ ಕಡ್ಡಾಯ: ಪರೀಕ್ಷಾ ಅಕ್ರಮಗಳನ್ನ ತಡೆಯುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರ ಹಾಗೂ ಕಾರಿಡಾರ್ನಲ್ಲಿ ಸಿಸಿಟಿವಿ ಅಳವಡಿಸುವಂತೆ ಪರೀಕ್ಷಾ ಮಂಡಳಿ ರಾಜ್ಯದ ಶಾಲೆಗಳಿಗೆ ಸೂಚನೆ ನೀಡಿದೆ. ಸಿಸಿಟಿವಿಗಳಲ್ಲಿನ ಪರೀಕ್ಷಾ ದಿನಗಳ ವಿಡಿಯೋ ದೃಶ್ಯಾವಳಿಗಳನ್ನು ಜಿಲ್ಲಾ ಹಂತದ ಸಮಿತಿಯಲ್ಲಿ ಪರಿಶೀಲಿಸಿ ವರದಿ ನೀಡುವಂತೆಯೂ ಆದೇಶಿಸಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಗೆ ಹಾಜರಾಗುವ ರಾಜ್ಯದ ಎಲ್ಲ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.