ಚಾಮರಾಜನಗರ: ಎಸ್‍ಎಸ್‍ಎಲ್ ಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದ್ದು, ಮುಸ್ಲಿಂ ಸಮುದಾಯದ ಕೆಲವು ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಕೇಂದ್ರಗಳಿಗೆ ಬಂದಿದ್ದರೂ, ಪೊಲೀಸರು, ಶಿಕ್ಷಕರು ಮನವೊಲಿಸಿದ ನಂತರ ಹಿಜಾಬ್ ತೆಗೆದು ಪರೀಕ್ಷಾ ಕೊಠಡಿಗೆ ಹೋಗಿದ್ದಾರೆ.
ಚಾಮರಾಜನಗರ ಜಿಲ್ಲೆಯ 58 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದೆ. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಲವು ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಬ್ ಹಾಕಿಕೊಂಡು ಬಂದಿದ್ದರು. ಪ್ರವೇಶ ದ್ವಾರದಲ್ಲಿದ್ದ ಪೊಲೀಸ್ ಸಿಬ್ಬಂದಿ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶವನ್ನು ವಿದ್ಯಾರ್ಥಿಗಳು ಹಾಗೂ ಅವರೊಂದಿಗೆ ಬಂದಿದ್ದ ಪೋಷಕರ ಗಮನಕ್ಕೆ ತಂದರು.
ಕೆಲವು ವಿದ್ಯಾರ್ಥಿನಿಯರು ಕೊಠಡಿಗೆ ಹೋಗುವ ಮುನ್ನವೇ ಹಿಜಾಬ್ ತೆಗೆದರೆ, ಇನ್ನೂ ಕೆಲವರು ಕೊಠಡಿಯ ಒಳಗೂ ಹಿಜಾಬ್ ಧರಿಸಿದ್ದರು. ಪರೀಕ್ಷಾ ಸಿಬ್ಬಂದಿ ಆ ವಿದ್ಯಾರ್ಥಿನಿಯರಿಗೂ ಮನವರಿಕೆ ಮಾಡಿದ ನಂತರ ಹಿಜಾಬ್ ತೆಗೆದರು.
ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಡಿಡಿಪಿಐ ಎಸ್.ಎನ್.ಮಂಜುನಾಥ್ ‘ಜಿಲ್ಲೆಯ 58 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. 56 ಕೇಂದ್ರಗಳು ಹೊಸ ವಿದ್ಯಾರ್ಥಿಗಳು ಹಾಗೂ ಎರಡು ಕೇಂದ್ರಗಳು ಖಾಸಗಿ ವಿದ್ಯಾರ್ಥಿಗಳಿಗೆ ಮೀಸಲಾಗಿವೆ. 12,271 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ’ ಎಂದರು.