ರಾಮನಗರ(Ramanagar): ಮಾಗಡಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಅವರಲ್ಲಿ 8 ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಮನಗರ ಎಸ್ಪಿ ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ.
ಇಂದು ರಾಮನಗರದಲ್ಲಿ ಮಾತನಾಡಿದ ಎಸ್ಪಿ ಅವರು, ಕೆಂಪೇಗೌಡ ಪ್ರೌಢಶಾಲೆಯ ಪ್ರಾಂಶುಪಾಲ ಶ್ರೀನಿವಾಸ್, ಕ್ಲರ್ಕ್ ರಂಗೇಗೌಡ, ರಂಗನಾಥ ಶಾಲೆಯ ಕೃಷ್ಣಮೂರ್ತಿ ಸೇರಿ 5 ಜನ ಶಿಕ್ಷಕರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಠಾಣೆಗೆ ದೂರು ನೀಡಿದ್ದ ದೇವರಾಜ್ ಎಂಬಾತನನ್ನು ವಿಚಾರಣೆ ಮಾಡಲಾಗುತ್ತಿದೆ. ಕೆಂಪೇಗೌಡ ಪ್ರೌಢಶಾಲೆ ಪರೀಕ್ಷಾ ಕೇಂದ್ರ ಇರಲಿಲ್ಲ. ರಂಗನಾಥ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ಇತ್ತು. ಆದರೆ ಕೃಷ್ಣಮೂರ್ತಿ ಪ್ರಶ್ನೆ ಪತ್ರಿಕೆಯನ್ನು ರಂಗೇಗೌಡನಿಗೆ ಕೊಟ್ಟಿರುವ ಮಾಹಿತಿ ಇದೆ ಎಂದು ತಿಳಿಸಿದರು.
ಪರೀಕ್ಷೆ ಪ್ರಾರಂಭ ಆಗುತ್ತಿದ್ದಂತೆ ಕೊಡುತ್ತಿದ್ದ ಬಗ್ಗೆ, ರಂಗೇಗೌಡ ಪ್ರಶ್ನೆ ಪತ್ರಿಕೆಯನ್ನು ತುಂಬಿ ಕೃಷ್ಣಮೂರ್ತಿಗೆ ಕೊಡುತ್ತಿದ್ದ ಮಾಹಿತಿ ಗೊತ್ತಾಗಿದೆ. ಇದರಲ್ಲಿ ಸ್ಥಳೀಯ ಪತ್ರಕರ್ತ ಎಂದು ಹೇಳಿಕೊಳ್ಳುತ್ತಿದ್ದ ಓರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದೂರುದಾರ ದೇವರಾಜ್ ಹಾಗೂ ಸ್ಥಳೀಯ ಪತ್ರಕರ್ತ ತಲಾ 10 ಸಾವಿರ ಹಣ ಪೀಕಿರುವ ಬಗ್ಗೆ ಮಾಹಿತಿ ಕೂಡ ಇದೆ ಎಂದು ತಿಳಿಸಿದರು.
ಮಕ್ಕಳಿಗೆ ಸಹಾಯ ಮಾಡಲು ಈ ರೀತಿ ಮಾಡಿದ್ದೇವೆಂದು ಕೆಲವರು ಹೇಳಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಮತ್ತಷ್ಟು ಜನ ಸೇರಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.