ಬೆಂಗಳೂರು : 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಬಹುನಿರೀಕ್ಷಿತ ಫಲಿತಾಂಶ ಇಂದು ಬೆಳಿಗ್ಗೆ 11:30ಕ್ಕೆ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಈ ಫಲಿತಾಂಶವನ್ನು ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಪರಿಶೀಲಿಸಬಹುದು.
ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ನಡೆಯಿತು. ರಾಜ್ಯಾದ್ಯಂತ ಒಟ್ಟು 2,818 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಸುಮಾರು 8.40 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹೀಗಾಗಿ ಈ ಬಾರಿ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಲ್ಲಿ ತೀವ್ರ ಕುತೂಹಲವಿದೆ.
ಈ ಸಾಲಿನ ಪರೀಕ್ಷಾ ಅಕ್ರಮ ತಡೆಗಟ್ಟುವ ಸಲುವಾಗಿ ಎಲ್ಲಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಈ ವ್ಯವಸ್ಥೆಯ ಕಾರಣದಿಂದ, ಕಳೆದ ವರ್ಷ ಜಾರಿಗೊಳಿಸಿದ್ದ ಶೇ.10 ರಷ್ಟು ಹೆಚ್ಚುವರಿ ಗ್ರೇಸ್ ಅಂಕ ವ್ಯವಸ್ಥೆಯನ್ನು ಈ ಬಾರಿ ಸಂಪೂರ್ಣವಾಗಿ ಕೈಬಿಡಲಾಗಿದೆ. ಹಿಂದಿನ ಸಾಲಿನಲ್ಲಿ, ಹೆಚ್ಚುವರಿ ಗ್ರೇಸ್ ಅಂಕ ನೀಡಿದರೂ, ಒಟ್ಟಾರೆ ಫಲಿತಾಂಶದಲ್ಲಿ ಶೇ.10 ರಷ್ಟು ಕುಸಿತ ಕಂಡುಬಂದಿತ್ತು. ಈ ಸಲ ಮಾತ್ರ ಅಂಕದ ವ್ಯಾಪ್ತಿಯಲ್ಲಿ ಯಾವುದೇ ಕೃತಕ ಹೆಚ್ಚಳವಿಲ್ಲದೆ, ನೈಜ ಅರ್ಹತೆ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುತ್ತಿದೆ ಎಂಬ ವಿಶ್ವಾಸ ಶಿಕ್ಷಣ ಇಲಾಖೆ ವ್ಯಕ್ತಪಡಿಸಿದೆ.
ಫಲಿತಾಂಶ ಪ್ರಕಟಗೊಂಡ ನಂತರ, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ (registration number) ಬಳಸಿ karresults.nic.in ನಲ್ಲಿ ಫಲಿತಾಂಶ ಪಡೆಯಬಹುದು. ಅಂತಿಮ ಅಂಕಪಟ್ಟಿಗಳು ನಂತರ ತಮ್ಮ ಶಾಲೆಗಳ ಮೂಲಕ ಲಭ್ಯವಾಗಲಿವೆ.














