ಬೆಂಗಳೂರು: ರಾಜ್ಯ ಸರ್ಕಾರ, 28 ವರ್ಷಗಳ ನಂತರ ಈ ವಾರ ನೋಂದಣಿ ಅಗತ್ಯವಿಲ್ಲದ ಎಲ್ಲಾ ದಾಖಲೆಗಳ ಸ್ಟ್ಯಾಂಪ್ ಡ್ಯೂಟಿ ಶುಲ್ಕ(ಮುದ್ರಾಂಕ ಶುಲ್ಕ)ವನ್ನು ಶೇ. 200 ರಿಂದ ಶೇ. 500 ವರೆಗೆ ಹೆಚ್ಚಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ಮಸೂದೆ, 2023 ಅನ್ನು ಮಂಡಿಸಿ ಅಂಗೀಕರಿಸಿದೆ.
ಫೆಬ್ರವರಿ 3 ರಂದು ರಾಜ್ಯಪಾಲರು ಈ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿದ್ದು, ಅದೇ ದಿನ ಹೊಸ ದರಗಳ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
ವಿಭಜನೆ, ದತ್ತು ಪತ್ರ, ಅಫಿಡವಿಟ್, ಕರಾರು ಪತ್ರದ ರದ್ದತಿ, ಕಂಪನಿಗಳ ಪುನರ್ನಿರ್ಮಾಣ ಅಥವಾ ವಿಭಜನೆ, ಅಡಮಾನದ ಮರುಹಂಚಿಕೆ ಇತ್ಯಾದಿಗಳನ್ನು ಒಳಗೊಂಡಂತೆ ಒಟ್ಟು 25 ರೀತಿಯ ದಾಖಲೆಗಳ ಸ್ಟ್ಯಾಂಪ್ ಡ್ಯೂಟಿ ಶುಲ್ಕವನ್ನು ಹೆಚ್ಚಿಸಲಾಗಿದೆ. ಆದರೆ ಇದು ಆಸ್ತಿ ತೆರಿಗೆಗೆ ಅನ್ವಯಿಸುವುದಿಲ್ಲ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಮತ್ತು ಸ್ಟಾಂಪ್ ಕಮಿಷನರ್, ಬಿ ಆರ್ ಮಮತಾ ಅವರು, “ಕಳೆದ ಬಾರಿ 1995 ರಲ್ಲಿ ಈ ಸ್ಟ್ಯಾಂಪ್ ಡ್ಯೂಟಿ ಶುಲ್ಕ ಹೆಚ್ಚಿಸಲಾಗಿತ್ತು. ಈಗ ತಿದ್ದುಪಡಿಯ ಮೂಲಕ ನಾವು ನಮ್ಮ ಶುಲ್ಕವನ್ನು ಹೆಚ್ಚಿಸಿದ್ದೇವೆ. ಇತರ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಸ್ಟ್ಯಾಂಪ್ ಡ್ಯೂಟಿ ಶುಲ್ಕವನ್ನು ಹೆಚ್ಚಿಸಿದ್ದೇವೆ. ಈ ಪಾವತಿಯು ಯಾವುದೇ ಒಪ್ಪಂದಕ್ಕೆ ಸಂಬಂಧಿದಂತೆ ಜನರಿಗೆ ಕಾನೂನು ರಕ್ಷಣೆಯನ್ನು ಖಚಿತಪಡಿಸುತ್ತದೆ. ವಿವಾದದ ಸಂದರ್ಭದಲ್ಲಿ ಅದರ ಮಹತ್ವ ತಿಳಿಯುತ್ತದೆ ಎಂದಿದ್ದಾರೆ.