ಅಬಕಾರಿ ಸನ್ನದುದಾರರಿಗೆ ಮುದ್ರಾಂಕ ಶುಲ್ಕ ವಿಧಿಸಿದ್ದ ಸರ್ಕಾರದ ಕ್ರಮವನ್ನು ಅಸಾಂವಿಧಾನಿಕ ಎಂದು ಈಚೆಗೆ ಆದೇಶಿಸಿರುವ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರವು 2015ರಲ್ಲಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.
ಕರ್ನಾಟಕ ಮದ್ಯ ಮಾರಾಟಗಾರರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಉಡುಪಿಯ ಬಿ ಗೋವಿಂದರಾಜ ಹೆಗ್ಡೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಕರ್ನಾಟಕ ಅಬಕಾರಿ ಕಾಯಿದೆ–1965ರ ಅಡಿಯಲ್ಲಿ ನೀಡಲಾಗಿರುವ ಅಬಕಾರಿ ಸನ್ನದುಗಳಿಗೆ ಕರ್ನಾಟಕ ಮುದ್ರಾಂಕ ಕಾಯಿದೆ–1957ರ ಸೆಕ್ಷನ್ 32 ಎ ಮತ್ತು 53 ಎ ಅನ್ವಯವಾಗುವುದಿಲ್ಲ. ಹೀಗಾಗಿ, ಸರ್ಕಾರ 2014ರ ಆಗಸ್ಟ್ 12ರಂದು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಲಾಗಿದೆ” ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯ) ನಿಯಮ–1968ರ ಅಡಿಯಲ್ಲಿ ಅರ್ಜಿದಾರರು 2014-15ನೇ ಸಾಲಿಗೆ ಸಿಎಲ್-2 (ವೈನ್ ಸ್ಟೋರ್) ಮತ್ತು ಸಿಎಲ್-9 (ಬಾರ್ ಅಂಡ್ ರೆಸ್ಟೋರೆಂಟ್) ಅಬಕಾರಿ ಪರವಾನಗಿ ಪಡೆದುಕೊಂಡಿದ್ದರು. ಆ ಸಮಯದಲ್ಲಿ ಅಬಕಾರಿ ಇಲಾಖೆಯು ಸನ್ನದುಗಳ ಮೇಲೆ ಮುದ್ರಾಂಕ ಶುಲ್ಕ ಪಾವತಿಸುವಂತೆ ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಪೀಠವು ಸನ್ನದಿನ ಮೇಲೆ ಮುದ್ರಾಂಕ ಶುಲ್ಕ ಪಾವತಿಸಬೇಕೇ ಹೊರತು ಅಬಕಾರಿ ಆದಾಯದ ಮೇಲಲ್ಲ ಎಂದು ಆದೇಶಿಸಿತ್ತು. ಅಂತೆಯೇ, ಸನ್ನದುಗಳಿಗೆ ಅಬಕಾರಿ ಶುಲ್ಕ ಅನ್ವಯವಾಗುತ್ತದೆಯೇ ಇಲ್ಲವೇ ಎಂಬ ಬಗ್ಗೆ ನೋಂದಣಿ ಮಹಾಪರಿವೀಕ್ಷಕ ಮತ್ತು ಮುಂದ್ರಾಕ ಆಯುಕ್ತರು ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು” ಎಂದು ನಿರ್ದೇಶಿಸಿತ್ತು.
“ರಾಜ್ಯ ಸರ್ಕಾರ ಅಬಕಾರಿ ಸನ್ನದುದಾರರಿಗೆ ಮುದ್ರಾಂಕ ಮೊತ್ತ ಪಾವತಿಸಬೇಕು” ಎಂದು 2014ರ ಆಗಸ್ಟ್ 12ರಂದು ಮತ್ತೊಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಪುನಾ ಹೈಕೋರ್ಟ್ ಮೆಟ್ಟಿಲೇರಿದ್ದರು.