ಶಿವಮೊಗ್ಗ: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ಹಾಗು ಕರ್ತವ್ಯನಿರತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನವಿರೋಧಿ ಕಾಂಗ್ರೆಸ್ ಸರಕಾರ ಕಿತ್ತೊಗೆಯುವರೆಗೂ ಹೋರಾಟ ಮುಂದುವರೆಸಲು ನಿರ್ಧರಿಸಿದ್ದೇವೆ. ಜೂ.13ರಂದು ಬೆಂಗಳೂರು ಮಹಾನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಗೆ ಬಿಜೆಪಿ ಕಾರ್ಯಕರ್ತರು, ಘಟನೆಯಲ್ಲಿ ನೊಂದ ಕುಟುಂಬಗಳ ಸದಸ್ಯರು ಬರಲಿದ್ದಾರೆ. ಸುಮಾರು 15- 20 ಸಾವಿರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಲಿದ್ದಾರೆ ಎಂದು ಅವರು ವಿವರಿಸಿದರು.
ಕರ್ತವ್ಯನಿರತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಈ ಪ್ರಕರಣದ ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿತ್ತು. ಆದರೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಗೆ ಆದೇಶಿಸಿದ್ದಾರೆ. ಅವರಿಗೆ ಬೇಕಾದವರನ್ನು ನೇಮಿಸಿ ರಾಜ್ಯ ಸರಕಾರಕ್ಕೆ ಕ್ಲೀನ್ ಚಿಟ್ ಕೊಟ್ಟು ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಹೊಣೆಯಿಂದ ತಪ್ಪಿಸಿಕೊಳ್ಳಲೆಂದೇ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿಎಂ, ಡಿಸಿಎಂ ನಡುವೆ ಪೈಪೋಟಿ ಇತ್ತು. ತಮ್ಮ ಜನಪ್ರಿಯತೆಗಾಗಿ ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಕಾರ್ಯಕ್ರಮ ಆಯೋಜಿಸಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮ ಏರ್ಪಡಿಸಿದ್ದರು. ಇವರ ಗೊಂದಲದಿಂದ ಬಲಿಯಾದವರು ಅಮಾಯಕ ಜನರು. ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.
ವಿಧಾನಸೌಧದ ಮುಂದೆ ರಾಜಕಾರಣಿಗಳ ಉಪಟಳ ತಡೆಯಲು ಸಾಧ್ಯವಾಗದೆ ಆರ್‌ಸಿಬಿ ಅಭಿಮಾನಿಗಳು ವಿಧಾನಸೌಧದ ಮೆಟ್ಟಿಲ ಬಳಿ ಚಪ್ಪಲಿ, ಕಲ್ಲು ತೂರಿದ್ದಾರೆ. ಇವರಿಗೆ ಸೆಲ್ಫಿ ಚಟ, ಜನಪ್ರಿಯತೆಯ ಚಟ ಇತ್ತು. ರಾಜ್ಯದ ಗೌರವವನ್ನೂ ಹಾಳು ಮಾಡಿದ್ದಾರೆ ಎಂದು ಟೀಕಿಸಿದರು.
ನಾಡಿನ ಜನರ ಭಾವನೆಯನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ತಿಳಿಸುವ ಉದ್ದೇಶದಿಂದ ಇವತ್ತು ಸಿಎಂಗೆ ಬಹಿರಂಗ ಪತ್ರ ಬರೆದಿರುವುದಾಗಿ ಅವರು ಹೇಳಿದರು. ಪ್ರಾಣ ಕಳೆದುಕೊಂಡ, ನೊಂದ ಕುಟುಂಬಗಳ ಸದಸ್ಯರ ಭಾವನೆಯು ರಾಜ್ಯದ ಸಿಎಂ, ಡಿಸಿಎಂ, ರಾಜ್ಯ ಸರಕಾರಕ್ಕೆ ಅರ್ಥ ಆಗಬೇಕೆಂಬ ನಿಟ್ಟಿನಲ್ಲಿ ಪತ್ರ ಬರೆದುದಾಗಿ ಸ್ಪಷ್ಟಪಡಿಸಿದರು.















