ತುಮಕೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆಯ ಕಾಲ್ತುಳಿತ ದುರಂತ ಮತ್ತೊಂದು ಕುಟುಂಬದ ಬದುಕನ್ನೇ ನಾಶ ಪಡಿಸಿದೆ. ಈ ಘಟನೆಯಲ್ಲಿ ತುಮಕೂರಿನ ಮನೋಜ್ ಎಂಬ ಯುವಕ ಮೃತಪಟ್ಟಿದ್ದು, ಇದೀಗ ಮೊಮ್ಮಗನ ಸಾವಿನ ನೋವಿನಲ್ಲೇ ಅಜ್ಜಿ ದೇವೀರಮ್ಮ ಕೊನೆಯುಸಿರೆಳೆದಿದ್ದಾರೆ. ಈ ಹೃದಯವಿದ್ರಾವಕ ಘಟನೆ ಕುಣಿಗಲ್ ತಾಲ್ಲೂಕಿನ ನಾಗಸಂದ್ರ ಗ್ರಾಮದಲ್ಲಿ ನಡೆದಿದೆ.
ಮನೋಜ್, ಬೆಂಗಳೂರಿನ ಹೆಬ್ಬಾಳದ ಕೆಂಪಾಪುರದಲ್ಲಿರುವ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ವಿದ್ಯಾರ್ಥಿ. ತಂದೆ ದೇವರಾಜ್, ತಾಯಿ ಹಾಗೂ ತಂಗಿಯೊಂದಿಗೆ ಯಲಹಂಕದಲ್ಲಿ ವಾಸವಾಗಿದ್ದ. ಆರ್‌ಸಿಬಿ ತಂಡದ ಐಪಿಎಲ್ ಗೆಲುವಿನ ಸಂಭ್ರಮದಲ್ಲಿ, ಸ್ನೇಹಿತರ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋದ ಮನೋಜ್ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದ. ಕುಟುಂಬದ ಏಕೈಕ ಮಗನ ಅಗಲಿಕೆಯಿಂದ ಕುಟುಂಬವೇ ಶೋಕಸಾಗರದಲ್ಲಿತ್ತು.
ಮನೋಜ್‌ನ ಸಾವಿನ ಸುದ್ದಿ ಕೇಳಿದ ಅಜ್ಜಿ ಬೆಚ್ಚಿಬಿದ್ದರು. ಮೊಮ್ಮಗನ ಮೇಲಿನ ಅಪಾರ ಪ್ರೀತಿಯಿಂದ ಸಂಕಟಗೊಂಡ ದೇವೀರಮ್ಮ ಶಾರೀರಿಕ ಹಾಗೂ ಮಾನಸಿಕವಾಗಿ ಕುಗ್ಗಿದರು. ಮೊಮ್ಮಗನ ಅಗಲಿಕೆ ಅಜ್ಜಿ ಕೊನೆಯುಸಿರೆಳೆದರು.
ತುಮಕೂರು ಡಿಸಿ ಶುಭಕಲ್ಯಾಣ್ ಅವರಿಂದ ಮನೋಜ್ ಕುಟುಂಬಕ್ಕೆ ₹25 ಲಕ್ಷ ಪರಿಹಾರದ ಚೆಕ್ ನೀಡಲಾಗಿದ್ದು, ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ತಂದೆ ದೇವರಾಜ್, ತಮ್ಮ ಆಕ್ರೋಶ ಮತ್ತು ದುಃಖವನ್ನು ವ್ಯಕ್ತಪಡಿಸಿದರು. “ಚೆಕ್ ಕೊಟ್ಟರೆ ಮಗಾ ಬರ್ತಾನಾ? ಇದ್ದೋನು ಒಬ್ಬನೇ ಮಗ. ಈ ಹಣ ನನ್ನ ಉಪಯೋಗಕ್ಕೆ ನಾನು ಬಳಸಲ್ಲ. ನನ್ನ ಮಗಳು ಮತ್ತು ಪತ್ನಿಯ ಖಾತೆಗೆ ಹಾಕಿಸುತ್ತೇನೆ” ಎಂದು ಹೇಳಿದರು.
ಮನೋಜ್ ವಿದೇಶದಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿದ್ದ. “ಅವನು ದುಡಿದು ಹಣ ಕೊಡದಿದ್ದರೂ ಪರವಾಗಿಲ್ಲ, ನಮ್ಮ ಜೊತೆ ಇದ್ದರೆ ಸಾಕಿತ್ತು. ಸರ್ಕಾರ ಕೊಟ್ಟ ಹಣ ನಮ್ಮ ನೋವನ್ನು ಮರೆಸಲ್ಲ. ಮುನ್ನೆಚ್ಚರಿಕೆ ಕೈಗೊಂಡಿದ್ದರೆ ಇಂತಹ ದುರ್ಘಟನೆ ಆಗುತ್ತಿರಲಿಲ್ಲ” ಎಂದವರು ಭಾವುಕತೆಯಿಂದ ಹೇಳಿದರು.














