ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜೂನ್ 11ರ ಬೆಳಗ್ಗೆ 10.30ಕ್ಕೆ ಮುಂದೂಡಿದೆ.
ಅನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್ ಹಾಗೂ ಶಮಂತ್ ಮಾವಿನಕೆರೆ ಎಂಬ ನಾಲ್ವರು ಆರೋಪಿಗಳು ತಮ್ಮ ಬಂಧನ ಕಾನೂನುಬಾಹಿರವಾಗಿದೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯ ವೇಳೆ, ಈ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ ಅವರು, “ಒಬ್ಬನ ಬಂಧನ ಕಾನೂನುಬಾಹಿರವೆಂದು ಸಾಬೀತಾದರೆ, ಆ ವ್ಯಕ್ತಿಯನ್ನು ಒಂದು ಕ್ಷಣವೂ ಜೈಲಿನಲ್ಲಿ ಇಡುವಂತಿಲ್ಲ” ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು.
ಇನ್ನು ತನಿಖೆಯ ಜವಾಬ್ದಾರಿಯನ್ನು ಸಿಐಡಿಗೆ ವರ್ಗಾವಣೆ ಮಾಡಿದ ಬಳಿಕವೂ ಸಿಸಿಬಿ ತಂಡ ಆರೋಪಿಗಳನ್ನು ಬಂಧಿಸಿದ್ದು ಕಾನೂನುಬಾಹಿರವಾಗಿದೆ ಎಂದು ವಾದ ಮಂಡಿಸಿದರು. ಜೊತೆಗೆ ಸರ್ಕಾರವೇ ಈಗಾಗಲೇ ಈ ಪ್ರಕರಣದಲ್ಲಿ ಪ್ರಮುಖ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಿದೆ, ರಾಜಕೀಯ ಕಾರ್ಯದರ್ಶಿಯನ್ನು ಹುದ್ದೆಯಿಂದ ಕೈಬಿಟ್ಟಿದೆ ಹಾಗೂ ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ವರ್ಗಾಯಿಸಿದೆ ಎಂಬುದನ್ನು ಹೈಕೋರ್ಟ್ ಗಮನಕ್ಕೆ ತಂದರು.
“ಅವರು ತಪ್ಪು ಮಾಡಿದ್ದಾರೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಆದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ, ಆರ್‌ಸಿಬಿ ತಂಡ ಹಾಗೂ ಡಿಎನ್‌ಎ ಸಂಸ್ಥೆಯವರನ್ನು ಮಾತ್ರ ಬಂಧಿಸಿರುವುದು ಏಕೆ?” ಎಂದು ವಕೀಲರು ಪ್ರಶ್ನಿಸಿದರು. ಪ್ರಕರಣದ ತನಿಖೆ ರಾಜಕೀಯ ಅಥವಾ ಆಯ್ಕೆಮಾಡಿದ ವ್ಯಕ್ತಿಗಳ ವಿರುದ್ಧದ ಕ್ರಮವೋ ಎಂಬ ಅನುಮಾನ ಮೂಡಿಸುವಂತಹ ವಾದವನ್ನು ಅವರು ಮುಂದಿಟ್ಟರು.
ವಿಚಾರಣೆಯ ವೇಳೆ ಸರ್ಕಾರದ ಪರ ಹೆಚ್ಚುವರಿ ಸಾರ್ವಜನಿಕ ವಕೀಲ (ಎಸ್‌ಪಿಪಿ) ಬಿ.ಎನ್. ಜಗದೀಶ್ ಅವರು, “ಸರ್ಕಾರದ ಪರವಾಗಿ ವಾದ ಮಂಡಿಸಲು ಹೆಚ್ಚು ಸಮಯ ಬೇಕು. ನಾಳೆ ಬೆಳಗ್ಗೆಯವರೆಗೆ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.
ಈ ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 11ರಂದು ಬೆಳಿಗ್ಗೆ 10.30ಕ್ಕೆ ಮುಂದೂಡಿದೆ. ಈ ವಿಚಾರಣೆ ಮೇಲೆ ಕರ್ನಾಟಕದಲ್ಲಿ ನಡೆದ ಅಘಾತಕರ ಕಾಲ್ತುಳಿತ ಪ್ರಕರಣದಲ್ಲಿ ಬಂಧಿತರ ನ್ಯಾಯಸ್ಥಿತಿ ಹಾಗೂ ಮುಂದಿನ ಕ್ರಮಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ.














