ಮನೆ ರಾಜಕೀಯ ಕಾಲ್ತುಳಿತ ಪ್ರಕರಣ: ಸಿದ್ದರಾಮಯ್ಯ ದಿನಕ್ಕೊಂದು ಹೇಳಿಕೆ : ಆರ್. ಅಶೋಕ್

ಕಾಲ್ತುಳಿತ ಪ್ರಕರಣ: ಸಿದ್ದರಾಮಯ್ಯ ದಿನಕ್ಕೊಂದು ಹೇಳಿಕೆ : ಆರ್. ಅಶೋಕ್

0

ಮೈಸೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುತ್ತಿರುವ ಪ್ರತಿದಿನದ ಹೇಳಿಕೆಗಳು ಅಸಂಗತವಾಗಿವೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ನಾಯಕ ಆರ್ ಅಶೋಕ್, ಸಿಎಂಗೆ “ಮಾನಸಿಕ ಸ್ಥಿತಿ ಸರಿ ಇಲ್ಲ” ಎಂದು ಕಟುವಾಗಿ ಟೀಕಿಸಿದ್ದಾರೆ.

ಮೈಸೂರು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅಶೋಕ್, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯಕ್ಷಮತೆಗೆ ಸಿಎಂ ಶೂನ್ಯ ಅಂಕ ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇನ್ನು 6 ತಿಂಗಳೊಳಗೆ ಅಧಿಕಾರದಿಂದ ಹೊರಡುವ ವ್ಯಕ್ತಿಯಿಂದ ಅಂಕ ಪಡೆಯುವುದು ಯಾರು ಬಯಸುತ್ತಾರೆ?” ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಔಟ್‌ಗೋಯಿಂಗ್ ವ್ಯಕ್ತಿ, ಅವರ ಮಾತಿಗೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಷ್ಟವಾಗಿದೆ ಎಂದು ದೂರಿದ ಅಶೋಕ್, ಗೃಹ ಸಚಿವರು ತಮ್ಮ ಮನೆಯ ಗೃಹಕ್ಕೆ ಮಾತ್ರ ಸಚಿವರಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಹಲವರು ಕಾದು ಕುಳಿತಿದ್ದಾರೆ ಎಂದು ಅವರು ತಿರುಗೇಟು ನೀಡಿದರು. “ಡಿಕೆ ಶಿವಕುಮಾರ್ ಸಿಎಂ ಆಗಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪರಮೇಶ್ವರ್, ಎಂ.ಬಿ. ಪಾಟೀಲ್ ಅವರಂತೆಯೇ ಇತರರು ಕೂಡ ಸಿಎಂ ಆಗಲು ಎದುರು ನೋಡುತ್ತಿದ್ದಾರೆ.

ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪವಿಟ್ಟು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಖುದ್ದಾಗಿ ಪತ್ರ ಬರೆದಿರುವುದಾಗಿ ಅಶೋಕ್ ಹೇಳಿದರು. “ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಸ್ಪಷ್ಟವಾಗಿದೆ. ರಾಜ್ಯ ಸರ್ಕಾರ ತಪ್ಪು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ನಾನು ಬರೆದ ಪತ್ರದ ಮೇಲೆ ಆಯೋಗದ ಸದಸ್ಯರು ತಾವೇ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸಬೇಕು” ಎಂದು ಒತ್ತಾಯಿಸಿದರು.