ಮನೆ ರಾಜ್ಯ ಕಾಲ್ತುಳಿತ ಪ್ರಕರಣ: ಬಕ್ರೀದ್ ಪ್ರಾರ್ಥನೆಯಿಂದ ದೂರ ಉಳಿದ ಸಿಎಂ ಸಿದ್ದರಾಮಯ್ಯ

ಕಾಲ್ತುಳಿತ ಪ್ರಕರಣ: ಬಕ್ರೀದ್ ಪ್ರಾರ್ಥನೆಯಿಂದ ದೂರ ಉಳಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ದಾರುಣ ಕಾಲ್ತುಳಿತ ದುರಂತದ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಕ್ರೀದ್‌ನ ಸಾಮೂಹಿಕ ಪ್ರಾರ್ಥನೆಯಿಂದ ದೂರ ಉಳಿದಿದ್ದಾರೆ.

ಸಾಮಾನ್ಯವಾಗಿ ಬಕ್ರೀದ್ ಹಾಗೂ ರಮಝಾನ್ ಹಬ್ಬಗಳ ವೇಳೆ ಸಿಎಂ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆಯುವ ಸಾಮೂಹಿಕ ಈದ್ ಪ್ರಾರ್ಥನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅವರು ಮುಖ್ಯಮಂತ್ರಿ ಆಗಿರುವಾಗಲೂ ಹಾಗೇ, ವಿಪಕ್ಷ ನಾಯಕರಾಗಿದ್ದಾಗಲೂ ಕೂಡ ಪ್ರಾರ್ಥನಾ ಸಭೆಗಳಲ್ಲಿ ಹಾಜರಾಗುತ್ತಿದ್ದರು. ಈ ಬಾರಿ ಮಾತ್ರ ಅವರು ತಮ್ಮ ನಿವಾಸದಲ್ಲಿಯೇ ಉಳಿದಿದ್ದು ಗಮನಾರ್ಹ.

ಆದರೆ, ಇದೇ ಮೊದಲ ಬಾರಿಗೆ ಕಾಲ್ತುಳಿತ ಪ್ರಕರಣ ಸರಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ. ವಸತಿ ಹಾಗೂ ವಕ್ಫ್ ಸಚಿವ ಝಮೀರ್‌ ಅಹ್ಮದ್ ಖಾನ್‌ ಪ್ರತೀ ಹಬ್ಬದ ಸಂದರ್ಭದಲ್ಲೂ ಮುಖ್ಯಮಂತ್ರಿಯನ್ನು ಈದ್ಗಾ ಮೈದಾನಕ್ಕೆ ಕರೆದುಕೊಂಡು ಪ್ರಾರ್ಥನೆಯಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದರು.

ಸಿಎಂ ಸಿದ್ದರಾಮಯ್ಯ ಅವರನ್ನು ಸಾಮೂಹಿಕ ಪ್ರಾರ್ಥನೆಗೆ ಕರೆದುಕೊಂಡು ಹೋಗಲು ಸಚಿವ ಝಮೀರ್‌ ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ. ಆದರೆ ಎಲ್ಲೂ ಬರುವುದಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ಮನೆಯಲ್ಲೇ ಉಳಿದಿದ್ದರು ಎಂದು ಮೂಲಗಳು ತಿಳಿಸಿವೆ.

ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ದುರಂತ ಸಾವನ್ನಪ್ಪಿದ್ದು, ಸರ್ಕಾರದ ಮೇಲೆ ಭಾರೀ ಒತ್ತಡವಿದೆ. ಸಾರ್ವಜನಿಕ ಆಕ್ರೋಶ, ವಿರೋಧ ಪಕ್ಷಗಳ ಟೀಕೆಗಳು, ಹೈಕೋರ್ಟ್ ವಿಚಾರಣೆ ಹಾಗೂ ತನಿಖೆಯ ಗಂಭೀರತೆಗೆ ಸಿಎಂ ಸಿದ್ಧರಾಮಯ್ಯ ಅವರು ಬಕ್ರೀದ್ ಕಾರ್ಯಕ್ರಮಗಳಿಂದ ಹಿಂದೆ ಸರಿದಿರುವ ಸಾಧ್ಯತೆಯಿದೆ.