ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಿಂದಾಗಿ 11 ಅಭಿಮಾನಿಗಳು ದುರ್ಮರಣಕ್ಕೀಡಾದ ಪಶ್ಚಾತ್ತಾಪ ಭರಿತ ಘಟನೆಯ ಕುರಿತು ಇದೀಗ ಕಾಂಗ್ರೆಸ್ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಘಟನೆಯ ಪರಿಣಾಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ದೆಹಲಿಗೆ ಬರಲು ಖುದ್ದಾಗಿ ಹೈಕಮಾಂಡ್ ಸೂಚನೆ ನೀಡಿದ್ದು, ಅವರು ನಾಳೆ (ಜೂನ್ 10) ದೆಹಲಿಗೆ ತೆರಳಲಿದ್ದಾರೆ.
ದೆಹಲಿಯಲ್ಲಿ ನಾಳೆ ರಾಹುಲ್ ಗಾಂಧಿ ಜೊತೆಗೆ ಸಿಎಂ, ಡಿಸಿಎಂ ಸಭೆ ನಡೆಸಲಿದ್ದಾರೆ. ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದ ಬಗ್ಗೆ ಗಂಭೀರವಾದಂತ ಚರ್ಚೆ ನಡೆಯಲಿದೆ. ಕಾಲ್ತುಳಿತ ದುರಂತದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನಗೊಂಡಿದ್ದು, ನಾಳೆ ದುರಂತದ ಬಗ್ಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಂದ ಮಾಹಿತಿ ಪಡೆಯಲಿದೆ.
ಆರ್‌ಸಿಬಿ ವಿಜಯೋತ್ಸವದಂದು ಸಾವಿರಾರು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸೇರಿದ್ದ ಸಂದರ್ಭ ಅವ್ಯವಸ್ಥೆ ಉಂಟಾಗಿ, 11 ಮಂದಿ ಪ್ರಾಣ ಕಳೆದುಕೊಂಡರು. ಈ ಸಂಬಂಧ ಸಿಎಂ ಮತ್ತು ಡಿಸಿಎಂ ಇಬ್ಬರ ಮೇಲೂ ಸಾರ್ವಜನಿಕವಾಗಿ ಹಾಗೂ ರಾಜಕೀಯವಾಗಿ ವಾಗ್ದಾಳಿ ನಡೆದಿದ್ದು, ಹೈಕಮಾಂಡ್ ಈಗ ನೇರವಾಗಿ ಸ್ಪಷ್ಟನೆ ಕೇಳಲು ಮುಂದಾಗಿದೆ.
ಸಂದರ್ಭಕ್ಕೆ ಸರಿಯಾದ ಭದ್ರತಾ ವ್ಯವಸ್ಥೆ, ಜನಸಂಚಾರ ನಿಯಂತ್ರಣ, ಉಚಿತ ಟಿಕೆಟ್ ವಿತರಣೆಯ ಪರಿಣಾಮದ ಬಗ್ಗೆ ಸರ್ಕಾರದ ತೀರ್ಮಾನಗಳು ಎಷ್ಟು ಸೂಕ್ತವಾಗಿದ್ದವು ಎಂಬುದರ ಬಗ್ಗೆ ಈಗ ಪಕ್ಷದ ಹೈಕಮಾಂಡ್ ನಿಖರ ಮಾಹಿತಿ ಪಡೆದು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.














