ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್, ಶಮಂತ್ ಮಾವಿನಕೆರೆಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆರೋಪಿಗಳು ಪಾಸ್ ಪೋರ್ಟ್ ವಶಕ್ಕೆ ನೀಡುವಂತೆ ನ್ಯಾ.ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ಷರತ್ತು ವಿಧಿಸಿ, ಮಧ್ಯಂತರ ಜಾಮೀನು ನೀಡಿದೆ.
ಪ್ರಕರಣದಲ್ಲಿ ತಮ್ಮನ್ನು ಬಂಧಿಸಿದ ಪೊಲೀಸರ ಕ್ರಮ ಕಾನೂನು ಬಾಹಿರವಾಗಿದ್ದು, ಕೂಡಲೆ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ನಾಲ್ವರು ಸಿಬ್ಬಂದಿ ಅರ್ಜಿ ಸಲ್ಲಿಸಿದ್ದರು. ಆರ್‌ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ, ಡಿಎನ್‌ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ನ ನಿರ್ದೇಶಕ ಸುನೀಲ್ ಮ್ಯಾಥ್ಯೂ, ಡಿಎನ್‌ಎ ಮ್ಯಾನೇಜರ್ ಕಿರಣ್ ಕುಮಾರ್ ಮತ್ತು ಸಮಂತ್ ಮಾವಿನಕೆರೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಮಧ್ಯಂತರ ಮನವಿ ಕುರಿತ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್.ಆರ್ ಕೃಷ್ಣ ಕುಮಾರ್ ಅವರ ಪೀಠ ಮಧ್ಯಂತರ ಜಾಮೀನು ನೀಡಿದೆ.
ಈ ಜಾಮೀನಿನ ಮೂಲಕ ನ್ಯಾಯಾಲಯ ಆರೋಪಿಗಳಿಗೆ ತಾತ್ಕಾಲಿಕ ಸ್ವಾತಂತ್ರ್ಯ ನೀಡಿದ್ದು, ಮುಂದಿನ ವಿಚಾರಣೆ ನಂತರವೇ ಪ್ರಕರಣದ ಭವಿಷ್ಯ ನಿರ್ಧಾರವಾಗಲಿದೆ.
ಷರತ್ತುಗಳು ಯಾವುವು?
- ಆರೋಪಿಗಳು ತನಿಖೆಗೆ ಸಹಕಾರ ನೀಡಬೇಕು.
- ಪ್ರಕರಣದ ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಬಾರದು.
- ನ್ಯಾಯಾಲಯದ ಆದೇಶವಿಲ್ಲದೆ ದೇಶ ಬಿಟ್ಟು ಹೋಗಬಾರದು.
- ಮುಂದಿನ ವಿಚಾರಣೆಗೆ ಹಾಜರಾಗುವುದು ಕಡ್ಡಾಯ.














