ಮನೆ ರಾಜ್ಯ ಅಕ್ಕನ ಸ್ಥಾನದಲ್ಲಿ ನಿಂತು ಪ್ರತಾಪ್ ಸಿಂಹ, ಪ್ರದೀಪ್ ಈಶ್ವರ್‌ಗೆ ಕಿವಿಮಾತು ಹೇಳ್ತೀನಿ – ಲಕ್ಷ್ಮೀ ಹೆಬ್ಬಾಳ್ಕರ್

ಅಕ್ಕನ ಸ್ಥಾನದಲ್ಲಿ ನಿಂತು ಪ್ರತಾಪ್ ಸಿಂಹ, ಪ್ರದೀಪ್ ಈಶ್ವರ್‌ಗೆ ಕಿವಿಮಾತು ಹೇಳ್ತೀನಿ – ಲಕ್ಷ್ಮೀ ಹೆಬ್ಬಾಳ್ಕರ್

0

ಉಡುಪಿ : ಅಕ್ಕನ ಸ್ಥಾನದಲ್ಲಿ ನಿಂತು ಪ್ರತಾಪ್ ಸಿಂಹ ಮತ್ತು ಪ್ರದೀಪ್ ಈಶ್ವರ್‌ಗೆ ಕಿವಿಮಾತು ಹೇಳುತ್ತೇನೆ ಎಂದು ಕೀಳುಮಟ್ಟದ ಭಾಷೆ ಪ್ರಯೋಗಿಸಿ ಜಗಳವಾಡದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಲಹೆ ನೀಡಿದರು.

ಉಡುಪಿಯಲ್ಲಿ ಮಾತನಾಡಿದ ಸಚಿವೆ, ಅಕ್ಕನ ಸ್ಥಾನದಲ್ಲಿ ನಿಂತು ಇಬ್ಬರಿಗೂ ಕಿವಿಮಾತು ಹೇಳುತ್ತೇನೆ. ನನ್ನ ವಿಚಾರದಲ್ಲೂ ಬಹಳಷ್ಟು ಅಪಮಾನಗಳನ್ನು ಅನುಭವಿಸಿದ್ದೇನೆ. ರಾಜಕಾರಣಿಗಳನ್ನು ಜನ ಗಮನಿಸುತ್ತಿದ್ದಾರೆ. ನಾವು ರೋಲ್ ಮಾಡೆಲ್ ಆಗಬೇಕೇ ಹೊರತು ನಾಚಿಕೆ ಆಗುವಂತೆ ವರ್ತಿಸಬಾರದು. ನಿಮ್ಮ ಆಚಾರ-ವಿಚಾರ ಭಾಷೆಯನ್ನು ಜನ ನೋಡ್ತಾರೆ. ನಿಮ್ಮ ತಂದೆ-ತಾಯಿಯನ್ನು ಎಳ್ಕೊಂಡು ಬರುವುದು ಸರಿಯಲ್ಲ, ಇಲ್ಲಿಗೆ ಬಿಟ್ಟುಬಿಡಿ. ಇಬ್ಬರು ಬುದ್ಧಿವಂತರಿದ್ದೀರಿ. ಸಾಕು ಇಲ್ಲಿಗೇ ಬಿಟ್ಟುಬಿಡಿ ಎಂದು ಕಿವಿಮಾತು ಹೇಳಿದರು.

ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತೆ. ಕ್ರಾಂತಿ ಮತ್ತು ಶಾಂತಿ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಬದಲಾವಣೆ ಎಐಸಿಸಿ ಅಧ್ಯಕ್ಷರ ಬಿಟ್ಟ ವಿಚಾರ. ನನ್ನ ಸಹಿತ ಎಲ್ಲರೂ ಪಕ್ಷ ಹೇಳಿದ್ದನ್ನು ಕೇಳುತ್ತೇವೆ. ಪಕ್ಷ ಸೇವೆ ಮಾಡಲು ಗುರುತಿಸಿ ಅವಕಾಶ ಕೊಟ್ಟಿದೆ. ನಿಮ್ಮ ಕೆಲಸ ಬೇರೆ ಇದೆ ಎಂದು ಪಕ್ಷ ಸೂಚಿಸಿದರೆ ಸಂತೋಷದಿಂದ ಕೇಳುತ್ತೇವೆ. ಡಿ.ಕೆ.ಶಿವಕುಮಾರ್ ಅವರು ಮಾತಿನಂತೆ ನಡೆದುಕೊಳ್ಳುವ ವ್ಯಕ್ತಿ. ಸೋನಿಯಾ ಗಾಂಧಿಯವರ ತ್ಯಾಗದ ಮಾತನ್ನು ಬಹಳಷ್ಟು ಸಾರಿ ಹೇಳಿದ್ದಾರೆ.

ಇದಕ್ಕೆ ವಿಶೇಷ ಅರ್ಥವನ್ನು ಕಲ್ಪಿಸುವುದು ಬೇಡ. ಗಾಂಧಿ ಪರಿವಾರ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಇತಿಹಾಸದ ಬಗ್ಗೆ ನಮಗೆಲ್ಲ ಗೊತ್ತಿದೆ. ಸೋನಿಯಾ ಗಾಂಧಿ ಅವರ ಬಗ್ಗೆ ಮಾತನಾಡಿದ್ದನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. ನವೆಂಬರ್ ಕ್ರಾಂತಿ ಅಂದ್ರೆ ಭ್ರಾಂತಿಯೆಂದ ಹೆಚ್.ಸಿ ಮಹಾದೇವಪ್ಪ ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. ಕ್ಯಾಬಿನೆಟ್‌ನಲ್ಲಿ ಅತ್ಯಂತ ಬುದ್ಧಿವಂತ ಮಂತ್ರಿ. ಅವರೇನೇ ಹೇಳಿದರೂ ಅದಕ್ಕೆ ನಾನು ಬೆಂಬಲಿಸುತ್ತೇನೆ ಎಂದು ತಿಳಿಸಿದರು.

ಈ ಪಕ್ಷದ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ಹೈಕಮಾಂಡ್ ಕೊಟ್ಟ ಜವಾಬ್ದಾರಿ ಕಡೆ ಗಮನ ಕೊಡುತ್ತೇನೆ. ಶ್ರೀಕೃಷ್ಣ ಪರಮಾತ್ಮನಲ್ಲಿ ಬೇಡಿಕೊಳ್ಳುತ್ತೇನೆ. ನಿನ್ನ ಸೇವೆ ಮಾಡುವ ಅವಕಾಶ ಇನ್ನೂ ಕೊಡು ಎಂದು ಕೇಳಿಕೊಳ್ಳುತ್ತೇನೆ ಎಂದರು.

ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ಹೋರಾಟದಲ್ಲಿ ಪ್ರತ್ಯೇಕ ಧ್ವಜ ಹಾರಿಸಿದವರಿಗೆ ನಾನು ಬೆಂಬಲ ಕೂಡ ಮಾಡಲ್ಲ. ಕರ್ನಾಟಕ ರಾಜ್ಯೋತ್ಸವ ದಿನ ಬಹಳ ಪವಿತ್ರವಾದದ್ದು. ಕರ್ನಾಟಕದ ಏಕೀಕರಣಕ್ಕೆ ಹಿರಿಯರು, ಸಾಹಿತಿಗಳು ಹೋರಾಟ ಮಾಡಿದ್ದಾರೆ. ಸುಸಂದರ್ಭದಲ್ಲಿ ಈ ಬೆಳವಣಿಗೆಗಳ ಬಗ್ಗೆ ನಾನು ಮಾತಾಡಲ್ಲ. ಈ ಬೆಳವಣಿಗೆ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಈಗ ಮಾತಾಡಲ್ಲ ಎಂದು ಹೇಳಿದರು.

ಉಡುಪಿಯಲ್ಲಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಧ್ವಜಾರೋಹಣ ಮಾಡಿದರು. ಗೌರವ ವಂದನೆ ಸ್ವೀಕರಿಸಿ, ಪೊಲೀಸ್ ಪಥ ಸಂಚಲನ ವೀಕ್ಷಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಮಂಡಳಿಯ ಎಂಎ ಗಫೂರ್ ಭಾಗಿಯಾಗಿದ್ದರು.