ಬೆಂಗಳೂರು: ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. ರಾಜ್ಯ ಬಿಜೆಪಿ ಬೆಳವಣಿಗೆ ವರಿಷ್ಠರ ಗಮನಕ್ಕೆ ಬಂದಿಲ್ಲ ಅನ್ನಿಸುತ್ತೆ. ಕೆಲ ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಟೀಕೆ ಮಾಡುತ್ತಿಲ್ಲ. ಲಿಂಗಾಯತ ನಾಯಕರಲ್ಲಿ ಬಿಎಸ್ವೈ ಬಿಟ್ಟರೆ ನಾನೇ ಹಿರಿಯ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.
ಇಂದು(ಏಪ್ರಿಲ್ 17) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕೆ ಬಿಜೆಪಿಯೊಳಗಿನ ಆಂತರಿಕ ಬೆಳವಣಿಗೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.
ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಕಟ್ಟಿ ಬೆಳೆಸಿದ್ದೇನೆ. ಬಿಜೆಪಿ ನನಗೆ ಎಲ್ಲಾ ಗೌರವ ಹಾಗೂ ಸ್ಥಾನಮಾನ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಕಟ್ಟಿ ಬೆಳೆಸುವ ಕೆಲಸ ಮಾಡಿದ್ದೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಟಿಕೆಟ್ ಇಲ್ಲ ಎಂದಾಗ ನನಗೆ ಆಘಾತವಾಯಿತು. ನಾನು ಜನಸಂಘ, ಸಂಘ ಪರಿವಾರದ ಕುಟುಂಬದಿಂದ ಬಂದ ವ್ಯಕ್ತಿ. ಕಳೆದ 6 ತಿಂಗಳಿನಿಂದ ಕಡೆಗಣಿಸಿದ್ದರು, ನನಗೆ ಗೌರವ ಕೊಡಲಿಲ್ಲ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಹಲವಾರು ತಿಂಗಳ ಹಿಂದೆ ಹಿರಿಯ ನಾಯಕನಾಗಿ ನನಗೆ ಏನು ವೇದನೆ ಆಗಿದೆ ಎನ್ನುವುದು ಯಾರ ಗಮನಕ್ಕೂ ಬರಲಿಲ್ಲ. ನಾನು ಯಡಿಯೂರಪ್ಪ ಅನಂತ್ ಕುಮಾರ್ ಮಾರ್ಗದರ್ಶನದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಬಿಜೆಪಿ ಎಲ್ಲ ರೀತಿ ಗೌರವ ಸ್ಥಾನ ಮಾನ ನೀಡಿದೆ. ಅದಕ್ಕೆ ಪ್ರತಿಯಾಗಿ ನಾನೂ ಬಿಜೆಪಿ ಕಟ್ಟಿ ಬೆಳೆಸುವ ಕೆಲಸ ಮಾಡಿದ್ದೇನೆ. ಆದರೆ ಆರು ಬಾರಿ 1994ರಿಂದ ಸ್ಪರ್ಧೆ ಮಾಡಿದ್ದೇನೆ. ಇದು ಏಳನೇ ಬಾರಿ ನಾನು ಸ್ಪರ್ಧೆ ಮಾಡಬೇಕಾಗಿರುವುದು. ಸಹಜವಾಗಿ ಟಿಕೆಟ್ ಇಲ್ಲ ಅಂದಾಗ ಆಘಾತ ಆಯ್ತು, ವೇದನೆ ಆಯ್ತು. ಹಿರಿಯ ನಾಯಕನಾಗಿ ನನಗೆ ಗೌರವ ಕೊಡಲಿಲ್ಲ ಎಂದು ಹೇಳಿದರು.
ಅಧಿಕಾರದ ಲಾಲಸೆಗಾಗಿ ನಾನು ಅಧಿಕಾರಕ್ಕೆ ಬಂದವನಲ್ಲ. ಜನ ಸಂಘದ ಸಂಘ ಪರಿವಾರದ ಕುಟುಂಬದಿಂದ ಬಂದ ವ್ಯಕ್ತಿ. ಕಳೆದ ಆರು ತಿಂಗಳಿಂದ ವೇದನೆ ಅನುಭವಿಸಿದ್ದೇನೆ. ಅಧಿಕಾರ ಬೇಕಾಗಿಲ್ಲ ನನಗೆ. ಒಂದು ವಾರದ ಮುಂಚೆ ಸೂಚನೆ ನೀಡಿದ್ದರು. ಬೆಳಗ್ಗೆ ಫೋನ್ ಮಾಡಿ ನಿಮಗೂ ಈಶ್ವರಪ್ಪಗೂ ಟಿಕೆಟ್ ಇಲ್ಲ ಒಪ್ಪಿಗೆ ಪತ್ರ ಕೊಡಿ ಎಂದು ಹೇಳಿದರು. ಒಬ್ಬ ಸಣ್ಣ ಬಾಲಕನಿಗೆ ಹೇಳಿದ ಹಾಗೆ ಹೇಳುತ್ತಾರೆ. ಮೊದಲೇ ಎಲ್ಲ ನಾಯಕರೂ ಬಂದು ಮಾತನಾಡಬೇಕಿತ್ತಲ್ಲ. ಕ್ಷೇತ್ರದ ಜನರ ಸ್ವಾಭಿಮಾನಕ್ಕೂ ಪೆಟ್ಟು ಹಿರಿಯನಾಗಿ ನನಗೂ ಅವಮಾನವಾಗಿದೆ. ಯಾವ ಪಕ್ಷ ಕಟ್ಟಿ ಬೆಳೆಸಿದ್ದೀವೋ ಅಂತ ಪಕ್ಷದ ಮನೆಯಿಂದ ಹೊರಹಾಕಿದ್ದಾಗ ನೋವಾಗುತ್ತಿದೆ ಎಂದರು.