ಬೆಂಗಳೂರು(Bengaluru): ಖರ್ಚು ವೆಚ್ಚಗಳನ್ನು ಸರಿದೂಗಿಸಲು ಸರ್ಕಾರಿ ಶಾಲೆ ಮಕ್ಕಳು ಪ್ರತಿ ತಿಂಗಳು ಪೋಷಕರಿಂದ ₹100 ಸಂಗ್ರಹಿಸಿ ಶಾಲಾಭಿವೃದ್ಧಿ – ಮೇಲುಸ್ತುವಾರಿ ಸಮಿತಿಗಳಿಗೆ ನೀಡಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯು ಅನ್ಯಾಯದ ಪರಮಾವಧಿ. ರಾಜ್ಯ ಬಿಜೆಪಿಗೆ ಸರ್ಕಾರಿ ಶಾಲೆಗಳನ್ನು ನಡೆಸುವ ಯೋಗ್ಯತೆ ಇಲ್ಲ ಎಂಬುದನ್ನು ಈ ನಿರ್ಧಾರ ದೃಢಪಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅಗತ್ಯವಿರುವ ಖರ್ಚುವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು ₹ 100 ಸಂಗ್ರಹಿಸಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರದ ಈ ನಡೆ ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ, ಕಡ್ಡಾಯ ಶಿಕ್ಷಣ ಹಕ್ಕು ಮೊಟಕುಗೊಳಿಸುವ ಹುನ್ನಾರ ಎಂದು ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಡಿ.ಕೆ.ಶಿವಕುಮಾರ್, ಕೋವಿಡ್ ನಂತರದ ದಿನಗಳಲ್ಲಿ ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿದ್ದು, ಪೋಷಕರು ಆರ್ಥಿಕ ಸಂಕಷ್ಟದಲ್ಲಿರುವಾಗ ಶಾಲೆಯ ಖರ್ಚು ವೆಚ್ಚಗಳನ್ನು ಅವರ ಮೇಲೆ ಹೊರಿಸುವುದು ಯಾವ ನ್ಯಾಯ? ಸಂವಿಧಾನ ವಿಧಿ 21ಎ ಹಾಗೂ ಶಿಕ್ಷಣದ ಹಕ್ಕಿನ ನಿಯಮಗಳನ್ನೂ ಉಲ್ಲಂಘಿಸಿ ಈ ರೀತಿಯ ಅವೈಜ್ಞಾನಿಕ ನಿರ್ಧಾರ ಹೊರಡಿಸಿರುವುದು ಸರಿಯಲ್ಲ ಎಂದಿದ್ದಾರೆ.
ಸರ್ಕಾರ ಹೊರಡಿಸಿರುವ ಸುತ್ತೋಲೆಯು ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಿಸುವ ಒಂದು ಹುನ್ನಾರ. ಸರ್ಕಾರಿ ಶಾಲೆ ಮಕ್ಕಳಿಗೆ ಅನ್ಯಾಯವಾಗುವುದನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಸಹಿಸುವುದಿಲ್ಲ. 2023ಕ್ಕೆ ಅಧಿಕಾರಕ್ಕೆ ಬಂದನಂತರ ಇಂಥ ಶಿಕ್ಷಣ ವಿರೋಧಿ ನೀತಿಗಳನ್ನು ಹಿಂಪಡೆಯುತ್ತೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.