ಮನೆ ರಾಜ್ಯ ರಾಜ್ಯ ಸಚಿವ ಸಂಪುಟ ಸಭೆ ಹೈಲೈಟ್ಸ್: ಕಾಲ್ತುಳಿತ ತನಿಖೆಗೆ ಮ್ಯಾಜಿಸ್ಟ್ರೇಟ್ ಆದೇಶ, ಹಲವು ಅಭಿವೃದ್ಧಿ ಯೋಜನೆಗಳಿಗೆ...

ರಾಜ್ಯ ಸಚಿವ ಸಂಪುಟ ಸಭೆ ಹೈಲೈಟ್ಸ್: ಕಾಲ್ತುಳಿತ ತನಿಖೆಗೆ ಮ್ಯಾಜಿಸ್ಟ್ರೇಟ್ ಆದೇಶ, ಹಲವು ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ನಗರಾಭಿವೃದ್ಧಿ, ಸಾರ್ವಜನಿಕ ಆರೋಗ್ಯ, ಕ್ರೀಡೆ, ಮಹಿಳಾ ಸಬಲೀಕರಣ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಅನುಮೋದನೆ ದೊರೆತಿದೆ.

ಕಾಲ್ತುಳಿತ ದುರಂತಕ್ಕೆ ಮ್ಯಾಜಿಸ್ಟ್ರೇಟ್ ತನಿಖೆ : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 56 ಮಂದಿ ಗಾಯಗೊಂಡಿದ್ದಾರೆ. ಘಟನೆಯ ತನಿಖೆಗಾಗಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ನಿರ್ಧಾರವಾಗಿದ್ದು, ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ. ಸಚಿವ ಸಂಪುಟ ದುಃಖ ವ್ಯಕ್ತಪಡಿಸಿದೆ.

ಬೆಂಗಳೂರು ಕಾರಿಡಾರ್ ಯೋಜನೆಗೆ ಭಾರಿ ಬಂಡವಾಳ : ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಕಾರಿಡಾರ್ ನಿರ್ಮಾಣಕ್ಕೆ 17,780 ಕೋಟಿ ರೂ. ವೆಚ್ಚದ ಯೋಜನೆಗೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದೆ. ಈ ಮೂಲಕ ನಗರ ಸಂಚಾರದ ಭಾರ ತಗ್ಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ.

ಮಹಿಳಾ ಮತ್ತು ಉದ್ಯೋಗಪರ ಹಾಸ್ಟೆಲ್ ಯೋಜನೆ : ಕೋಲಾರ ಮತ್ತು ತುಮಕೂರಿನಲ್ಲಿ ಕೈಗಾರಿಕಾ ಪ್ರದೇಶಗಳಿಗೆ ಹಾಸ್ಟೆಲ್ ಮತ್ತು ಮಹಿಳೆಯರಿಗಾಗಿ ವರ್ಕಿಂಗ್ ಹಾಸ್ಟೆಲ್ ನಿರ್ಮಾಣಕ್ಕೆ 193 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.

ಕ್ರೀಡಾಂಗಣ ಮತ್ತು ಸಾರಿಗೆ ಅಭಿವೃದ್ಧಿ : ಹಾವೇರಿ ಕ್ರೀಡಾಂಗಣ ಅಭಿವೃದ್ಧಿಗಾಗಿ 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ 10 ಕೋಟಿ ರೂ. ವೆಚ್ಚದ ಯೋಜನೆ, ಕಲ್ಯಾಣ ಕರ್ನಾಟಕ ಸಾರಿಗೆಗೆ 35 ಕೋಟಿ ರೂ. ವೆಚ್ಚದಲ್ಲಿ 56 ಹೊಸ ಬಸ್ಸುಗಳ ಖರೀದಿ, ಅರಸೀಕೆರೆ ಬಸ್ ನಿಲ್ದಾಣ ಅಭಿವೃದ್ಧಿಗೆ 20 ಕೋಟಿ ರೂ. ವೆಚ್ಚದ ಅನುಮೋದನೆ ದೊರೆತಿದೆ.

ಆರೋಗ್ಯ ಮತ್ತು ವಸತಿ ಯೋಜನೆಗಳು : 1185 ಕೋಟಿ ರೂ. ವೆಚ್ಚದಲ್ಲಿ ಔಷಧಿಗಳ ಖರೀದಿಗೆ ‘ಗೃಹ ಆರೋಗ್ಯ ಯೋಜನೆ’ ಜಾರಿಗೆ ಒಪ್ಪಿಗೆ ನೀಡಲಾಗಿದೆ. ‘ಆರೋಗ್ಯ ಕವಚ’ ಸೇವೆಯನ್ನು ಆರೋಗ್ಯ ಇಲಾಖೆ ನೇರವಾಗಿ ನಿರ್ವಹಿಸಲಿದೆ. ಸಂತ ಸೇವಾಲಾಲ್ ವಸತಿ ಶಾಲೆಗಳ ನಿರ್ಮಾಣಕ್ಕೆ 50 ಕೋಟಿ ರೂ. ಯೋಜನೆ, 1 ಬಿಹೆಚ್‌ಕೆ ವಸತಿ ಯೋಜನೆಗೆ ಮತ್ತು 3000 ರೂ. ಮಾಸಿಕ ಇಎಂಐ ಪ್ಲಾನ್‌ಗೆ ಸಹ ಒಪ್ಪಿಗೆ ನೀಡಲಾಗಿದೆ.

ಶಿಕ್ಷಣ, ಸಂಶೋಧನೆ ಮತ್ತು ಸಮುದಾಯ ಅಭಿವೃದ್ಧಿ : ಬಡ್ತಿ ನಿಯಮ ಸಡಿಲಿಸಲು ಶಾಲಾ ಶಿಕ್ಷಣ ಸೇವೆಗಳ ನಿಯಮ ತಿದ್ದುಪಡಿ ಮಾಡಲಾಗಿದೆ. ಐಐಎಸ್‌ಸಿ ಯಲ್ಲಿ 48 ಕೋಟಿ ರೂ. ವೆಚ್ಚದಲ್ಲಿ ಕ್ವಾಂಟಂ ಸಂಶೋಧನಾ ಪಾರ್ಕ್ ನಿರ್ಮಾಣ, ಕೈಗಾರಿಕಾ ತರಬೇತಿ ಸಂಸ್ಥೆಗಳ ಉನ್ನತೀಕರಣಕ್ಕೆ 1286 ಕೋಟಿ ರೂ. ವೆಚ್ಚದ ಯೋಜನೆಗೂ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.

ಇತರೆ ಪ್ರಮುಖ ನಿರ್ಧಾರಗಳು
– ಬಾಪೂಜಿ ವಿದ್ಯಾಸಂಸ್ಥೆಗೆ 2.40 ಎಕರೆ ಭೂಮಿ, ಕನಕ ಸಮುದಾಯ ಭವನಕ್ಕೆ 1 ಎಕರೆ ಭೂಮಿ
– 108 ದಿಗಂಬರ ಜೈನ ಟ್ರಸ್ಟ್‌ಗೆ 5.20 ಎಕರೆ ಭೂಮಿ
– ದಿ. ಕೊಲೂರು ಮಲ್ಲಪ್ಪ ಸ್ಮಾರಕ ಭವನ ನಿರ್ಮಾಣ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ
– ಕಮಾಂಡ್ ಕಂಟ್ರೋಲ್ ಸ್ಥಾಪನೆಗೆ ಒಪ್ಪಿಗೆ

ಮುಖ್ಯಮಂತ್ರಿಗಳು, ಅಧಿಕಾರಿಗಳು ಮತ್ತು ಹಿರಿಯ ಸಚಿವರ ಜೊತೆ ಸಭೆ ನಡೆಸಿದ್ದು, ಕಾಲ್ತುಳಿತ ಪ್ರಕರಣದ ಕುರಿತು ಹೆಚ್ಚಿನ ಸ್ಪಷ್ಟತೆ ಮತ್ತು ಉತ್ತರದ ಪ್ರಕ್ರಿಯೆಯ ಕುರಿತು ಚರ್ಚೆ ನಡೆಸಲಾಗಿದೆ.