ಮೈಸೂರು: ರಾಜ್ಯದಲ್ಲಿ ಈಗಿರುವ ಸಿಎಂ ನಿಷ್ಪ್ರಯೋಜಕ ಏನೂ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಜಾಹೀರಾತುಗಳ ಸರ್ಕಾರ. ಜಾಹೀರಾತುಗಳ ಮೂಲಕವೇ ಉಸಿರಾಡುತ್ತಿದೆ ಎಂದು ಹರಿಹಾಯ್ದರು.
ಮೋದಿ ರಾಜ್ಯಕ್ಕೆ ಬಂದು ಸಿದ್ದರಾಮಯ್ಯನವರ ಸರ್ಕಾರ 10% ಸರ್ಕಾರ ಅಂದರು. ಅಂದು ಜನರಿಗೆ ಇದು ಮನಸ್ಸಿಗೆ ತಟ್ಟಲಿಲ್ಲ. ಆದರೆ ಈಗ ಬಿಜೆಪಿ 40% ಸರ್ಕಾರ ಎಂದು ನಾವು ಆರೋಪ ಮಾಡಿದ್ದೀವಿ. ಆದರೆ ಇಂದು ಈ ವಿಚಾರ ಜನರ ಮನಸ್ಸಿಗೆ ತಟ್ಟಿದೆ. ಜನರಿಗೆ ಇದು 40% ಸರ್ಕಾರ ಎಂದು ಗೊತ್ತಾಗಿದೆ ಎಂದು ಹೇಳಿದರು.
ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಶುದ್ಧ ಆಡಳಿತವೇ ನಮ್ಮ ಮುಖ್ಯ ವಿಷಯ. ಸಿಎಂ ಸ್ಥಾನದಲ್ಲಿ ಇದ್ದು ಜೈಲಿಗೆ ಹೋದ ಯಡಿಯೂರಪ್ಪ ರಾಜ್ಯಕ್ಕೆ ಒಂದು ಕಪ್ಪು ಚುಕ್ಕೆ. ಈಗಿನ ಸಿಎಂ ಒಬ್ಬ ನಿಷ್ಪ್ರಯೋಜಕ ಏನೂ ಕೆಲಸ ಮಾಡುತ್ತಿಲ್ಲ ಎಂದರು.
ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್’ಗಾಗಿ ಅರ್ಜಿ ಸಲ್ಲಿಸುವಾಗ 2 ಲಕ್ಷ ರೂ. ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ವೀರಪ್ಪ ಮೊಯ್ಲಿ, ನಮ್ಮದು ಸೈದ್ದಾಂತಿಕವಾದ ಪಕ್ಷ. ನಮ್ಮ ಕಾಲದಲ್ಲಿ ನಾವೆಂದು ಹಣ ಯಾರಿಂದಲು ಪಡೆದುಕೊಂಡಿಲ್ಲ. ಆದರೆ ಇಂದು ಕಾಲ ಬದಲಾಗಿದೆ ಅವರು ಪಡೆದುಕೊಂಡಿದ್ದಾರೆ? ಆದರೆ ನಮ್ಮ ಕಾಲದಲ್ಲಿ ಈ ಪದ್ಧತಿ ಇರಲಿಲ್ಲ ಎಂದು ತಿಳಿಸಿದರು.
ನಾನೇ ಮುಂದಿನ ಮುಖ್ಯಮಂತ್ರಿ ಎಂಬ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದು ಅವರವರ ವೈಯಕ್ತಿಕ ಆಸೆ, ಹೇಳಿಕೆ ವ್ಯಕ್ತಪಡಿಸುತ್ತಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ, ನಮ್ಮ ಪಕ್ಷಕ್ಕೆ ಸಮಸ್ಯೆಯು ಇಲ್ಲ. ಎಲ್ಲರು ಅವರವರ ಅಭಿಪ್ರಾಯವನ್ನು ಹೇಳುವ ಹಕ್ಕು ಇದೆ. ಆ ಹಕ್ಕನ್ನು ನಾವು ಹತ್ತಿಕ್ಕಲು ಸಾಧ್ಯವಿಲ್ಲ. ಇದು ನಮ್ಮ ಪಕ್ಷಕ್ಕೆ ಗೊಂದಲ ಆಗೋದಿಲ್ಲ. ನಮ್ಮ ಪರವಾಗಿ ಜನರು ಇದ್ದಾರೆ ಅನೇಕ ಯಾತ್ರೆ ಮಾಡಿದ್ದೇವೆ. ಈ ಯಾತ್ರೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬುದು ಗೊತ್ತಾಗಿದೆ. ಜನರು ನಮ್ಮ ಪರವಾಗಿ ಒಲವು ತೋರಿದೆ ಎಂದು ತಿಳಿಸಿದರು.
ಈ ಬಾರಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಬರುತ್ತೆ. ಜೆಡಿಎಸ್ ಜೊತೆ ಕೈ ಜೋಡಿಸುವ ಮಾತೆ ಇಲ್ಲ. ಅವರ ಜೊತೆ ಕೈ ಜೋಡಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇಂಥಾ ಪರಿಸ್ಥಿತಿ ಯಾವಾಗಲೂ ಆಗಿರಲಿಲ್ಲ. ಅವರಿಂದ ನಾವು ಸಾಕಷ್ಟು ಬುದ್ದಿ ಕಲಿತಿದ್ದೇವೆ ಎಂದು ನುಡಿದರು.
ನಾನು ಚುನಾವಣೆಯನ್ನು ಭ್ರಷ್ಟಾಚಾರ ಇಲ್ಲದೇ ಗೆದ್ದಿದ್ದೇನೆ. ಹಣ ಕೊಡದೆ 6 ಬಾರಿ ಶಾಸಕ ಆಗಿದ್ದೇನೆ. ಹಣದ ಪ್ರಭಾವ ಬಿಟ್ಟು ವರ್ಚಸ್ಸಿನ ಮೇಲೆ ಚುನಾವಣೆ ಗೆಲ್ಲಬೇಕು. ಹಣ ಕೊಟ್ಟು ಗೆದ್ದವರು, ಹಣದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಯುವಕರು ಆಗಮಿಸಿದರೆ ಗೆಲ್ಲುವ ಅಭ್ಯರ್ಥಿ ಇದ್ದರೆ ಟಿಕೆಟ್ ಕೊಡ್ತಿವಿ. ಎಂದು ವೀರಪ್ಪ ಮೊಯ್ಲಿ ಹೇಳಿದರು.