ನವದೆಹಲಿ: ಜನಸಾಮಾನ್ಯರ ಒಳಿತಿಗಾಗಿ ವಿತರಿಸಲು ಖಾಸಗಿ ಒಡೆತನದ ಎಲ್ಲ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಂವಿಧಾನದ ಅಡಿಯಲ್ಲಿ ರಾಜ್ಯಗಳಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಪೀಠ, 7:2 ಅನುಪಾತದಲ್ಲಿ ಬಹುಮತದ ತೀರ್ಪು ನೀಡಿದೆ.
ಆದರೂ, ಕೆಲವೊಮ್ಮೆ ರಾಜ್ಯಗಳು ಖಾಸಗಿ ಆಸ್ತಿಗಳ ಮೇಲೆ ಹಕ್ಕು ಸಾಧಿಸಬಹುದು ಎಂದು ಪೀಠ ಹೇಳಿದೆ.
ಸಂವಿಧಾನದ ಪರಿಚ್ಛೇದ 39(ಬಿ) ಅಡಿಯಲ್ಲಿ ಖಾಸಗಿ ಒಡೆತನದ ಎಲ್ಲ ಸಂಪನ್ಮೂಲಗಳನ್ನು ಸಾರ್ವಜನಿಕರ ಒಳಿತಿಗಾಗಿ ವಿತರಣೆ ಮಾಡಲು ರಾಜ್ಯಗಳು ಸ್ವಾಧೀನಪಡಿಸಿಕೊಳ್ಳಬಹುದು ಎಂಬ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಪೀಠದ ಹಿಂದಿನ ತೀರ್ಪನ್ನು ತಳ್ಳಿಹಾಕಿದೆ.
39(ಬಿ) ಅಡಿಯಲ್ಲಿ ಖಾಸಗಿ ಆಸ್ತಿಗಳನ್ನು ಸಮುದಾಯದ ಸಂಪನ್ಮೂಲಗಳು ಎಂದು ಪರಿಗಣಿಸಬಹುದೇ ಮತ್ತು ರಾಜ್ಯಗಳ ಅಧಿಕಾರಿಗಳು ಅವುಗಳನ್ನು ಸಾರ್ವಜನಿಕರಿಗೆ ಹಂಚಿಕೆಗಾಗಿ ಸ್ವಾಧೀನಪಡಿಸಿಕೊಳ್ಳಬಹುದೇ ಎಂಬ ಕಾನೂನಾತ್ಮಕ ಪ್ರಶ್ನೆಯನ್ನು ಪೀಠ ನಿರ್ಧರಿಸಿದೆ. ಸಿಜೆಐ ಡಿ.ವೈ. ಚಂದ್ರಚೂಡ್ ಮತ್ತು ಇತರ ಆರು ನ್ಯಾಯಮೂರ್ತಿಗಳು ಈ ಅಭಿಪ್ರಾಯಕ್ಕೆ ಬಂದಿದ್ದಾರೆ.
ಈ ತೀರ್ಪು ಜನಸಾಮಾನ್ಯರ ಒಳಿತಿಗಾಗಿ ರಾಜ್ಯಗಳು ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಸಮಾಜವಾದಿ ಸಿದ್ಧಾಂತದ ಮೇಲೆ ನೀಡಲಾದ ಹಲವು ತೀರ್ಪುಗಳನ್ನು ರದ್ದುಗೊಳಿಸಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಸಿಜೆಐ ಅವರು ಬರೆದ ಬಹುಮತದ ತೀರ್ಪನ್ನು ಭಾಗಶಃ ಒಪ್ಪಲಿಲ್ಲ, ಆದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಎಲ್ಲ ಅಂಶಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.