ಬೆಂಗಳೂರು: ಕೂಡಲೇ ಕಾವೇರಿ ನೀರು ಬಿಡುವ ನಿರ್ಧಾರ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ. ರಾಜ್ಯವನ್ನು ಆಳುವ ನೈತಿಕತೆ ಸರ್ಕಾರಕ್ಕೆ ಇಲ್ಲ. ಕಾವೇರಿ ಹೋರಾಟವನ್ನು ಯಾರೇ ಮಾಡಿದರೂ ಅದಕ್ಕೆ ಬಿಜೆಪಿ ಬೆಂಬಲ ಕೊಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಹೇಳಿದರು.
ಸರ್ಕಾರ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಮಾತನಾಡಿದ ಅವರು, ಕರ್ನಾಟಕದ ನೆಲ, ಜಲ ರಕ್ಷಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪ ಮಾಡಿದರು.
ಕಾವೇರಿ ನದಿ ನೀರು ಸಂರಕ್ಷಣೆ ಮಾಡುವಲ್ಲೂ ಸರ್ಕಾರ ಎಡವಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನೀರಿಗೆ ಹಾಹಾಕಾರವಾದರೆ ಸಿಎಂ ಸಿದ್ದರಾಮಯ್ಯ ಹೊಣೆ. ಬೆಂಗಳೂರಿಗೆ ಕುಡಿಯುವ ನೀರಿಲ್ಲ. ಇದನ್ನು ಕೋರ್ಟ್ಗೆ ಹೇಳಿಲ್ಲ. ತಮಿಳುನಾಡಿಗೆ ಸರ್ಕಾರ ಈಗಾಗಲೇ ದೊಡ್ಡ ಲಾಭ ಮಾಡಿಕೊಟ್ಟಿದೆ. ಹೇಡಿ ನಿರ್ಧಾರ ವಾಪಸ್ ಪಡೆಯುವಂತೆ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ರ್ಯಾಂಡ್ ಬೆಂಗಳೂರು ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಬ್ರ್ಯಾಂಡ್ ಬೆಂಗಳೂರೋ ಅಥವಾ ಬ್ಯಾಂಡ್ ಬೆಂಗಳೂರೋ ಎನ್ನುವುದು ಮುಂದೆ ಗೊತ್ತಾಗುತ್ತದೆ. ತಮಿಳುನಾಡಿನ ಹಿತ ಕಾಪಾಡಲು ರಾಜ್ಯದ ಹಿತಾಸಕ್ತಿ ಬಲಿಕೊಟ್ಟಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಮೊದಲು 10 ಸಾವಿರ ಕ್ಯೂಸೆಕ್ ನೀರು ಹರಿಸಿದಾಗಲೂ ಸುಮ್ಮನಿದ್ದರು. ಎರಡನೇ ಬಾರಿ ಕಾವೇರಿ ನೀರು ಬಿಟ್ಟಾಗ ಸರ್ವಪಕ್ಷಗಳ ಸಭೆ ಕರೆದರು. ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರೂ ಹಾಕಲಿಲ್ಲ. 32 ಟಿಎಂಸಿ ನೀರಿನ ಬದಲು 67 ಟಿಎಂಸಿ ನೀರನ್ನು ತಮಿಳುನಾಡು ಅಕ್ರಮವಾಗಿ ಬಳಸಿದೆ. ಇದನ್ನು ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟಿಲ್ಲ. ಹೀಗಾಗಿ ಪದೇಪದೇ ನೀರು ಬಿಡುವ ಸ್ಥಿತಿ ಬಂದಿದೆ. ರೈತರು ಹೋರಾಟ ಮಾಡಿದರೇ, ಅವರೇ ಕೋರ್ಟ್ ಗೆ ಹೋಗಬೇಕು. ಸುಪ್ರಿಂಕೋರ್ಟ್ ಮುಂದೆ ಸರಿಯಾಗಿ ವಾದ ಮಾಡಿಲ್ಲ ಎಂದರು.
ಪ್ರದಾನಿಗೆ ಪತ್ರ ಬರೆದಿದ್ದೇವೆ ಎನ್ನುತ್ತಾರೆ. ರಾಜಕೀಯವಾಗಿ ಇದನ್ನು ಪರಿವರ್ತನೆ ಮಾಡುವ ಯತ್ನ ಮಾಡುತ್ತಿದ್ದಾರೆ. ಇಂಡಿಯಾ ಒಕ್ಕೂಟದಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೂಡ ಇದ್ದಾರೆ. ಅವರಿಗೆ ಪತ್ರ ಬರೆದು, ಇಲ್ಲಿನ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ಸೋನಿಯಾಗಾಂಧಿ ಮಧ್ಯಪ್ರವೇಶ ಮಾಡಬೇಕು. ಮತ್ತೆ ನೀರು ಕೇಳಬೇಡಿ ಎಂದು ಹೇಳಬೇಕು. ಎರಡೂ ರಾಜ್ಯದ ಸಿಎಂ ಕರೆಸಿ ಮಾತನಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಬಿಜೆಪಿ ನಾಯಕರು ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆಗೆ ಮುಂದಾದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಕಾರಜೋಳ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.