ಬೆಂಗಳೂರು: ಕರ್ನಾಟಕದಲ್ಲಿ ನಿರಂತರ ಮಳೆ, ಗಾಳಿ ಮತ್ತು ಉಕ್ಕಿ ಹರಿಯುತ್ತಿರುವ ನದಿಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಿಂದ ಗುಡ್ಡ ಕುಸಿದು ಸಾಕಷ್ಟು ಹಾನಿಯಾಗಿವೆ. ಕೆಲ ರಸ್ತೆ ಮತ್ತು ರೈಲು ಸಂಪರ್ಕ ಬಂದ್ ಆಗಿವೆ. ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿನ ಸಪ್ತ ನದಿಗಳು ತುಂಬಿ ಹರಿಯುವುತ್ತಿರುವುದರಿಂದ ಕೆಲ ಗ್ರಾಮಗಳಿಗೆ ನೀರು ನುಗ್ಗಿದೆ.
ಇದರಿಂದ ಸಾಕಷ್ಟು ಬೆಳೆ ಹಾನಿಯಾಗಿದೆ. ಬೆಳೆ ಹಾನಿಯಾದ ಜಮೀನುಗಳಿಗೆ ಮಂಗಳವಾರ ಬಿಜೆಪಿ ನಾಯಕರು ಆರು ತಂಡಗಳಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಆರಗ ಜ್ಞಾನೇಂದ್ರ, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ನೇತೃತ್ವದ ತಂಡಗಳು ರಾಜ್ಯಾದ್ಯಂತ ಸಂಚರಿಸಲಿವೆ.
ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ತಂಡ ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ತಂಡ ಪ್ರವಾಸ ಕೈಗೊಳ್ಳಲಿದೆ. ಮಾಜಿ ಸಚಿವ ಅಶ್ವತ್ಥ್ ನಾರಾಯಣ ನೇತೃತ್ವದ ತಂಡ ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಲಿದೆ.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ. ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ನೇತೃತ್ವದ ತಂಡ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಪರಿಶೀಲನೆಗೆ ಇಳಿಯಲಿದೆ. ಮಾಜಿ ಸಚಿವ ಬಿ. ಶ್ರೀರಾಮುಲು ನೇತೃತ್ವದ ತಂಡ ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಶ್ರೀರಾಮುಲು ನೇತೃತ್ವದ ತಂಡದಲ್ಲಿ ಶಾಸಕ ಜನಾರ್ದನ ರೆಡ್ಡಿ ಇದ್ದಾರೆ.