ಹುಣಸೂರು(Hunsur): ಕಾಡಿನಿಂದ ನಾಡಿಗೆ ಲಗ್ಗೆ ಇಡುವ ಕಾಡಾನೆಗಳ ನಿಯಂತ್ರಣಕ್ಕೆ, ರಾಜ್ಯದಲ್ಲೇ ಮೊದಲ ಬಾರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅಳವಡಿಸಿರುವ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ವೀಕ್ಷಿಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅನ್ನು ಅಳವಡಿಕೆ ಮಾಡಲಾಗಿದೆ. ರೈಲ್ವೆ ಹಳಿ ಬ್ಯಾರಕೇಡ್ ಗಳನ್ನೇ ಆನೆಗಳು ದಾಟಿ ಬರುವುದರಿಂದ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ, ಆನೆಗಳ ತಡೆಗೆ ಹೇಗೆ ಸಹಕಾರಿಯಾಗಲಿದೆ ಎಂಬುದನ್ನು ಸಚಿವರಿಗೆ ಅರಣ್ಯ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ರೈಲ್ವೆ ಬ್ಯಾರಿಕೇಡ್ ಗೆ ಹಳಿಗಳ ಕೊರತೆ ಹಾಗೂ ದುಬಾರಿ ವೆಚ್ಚ ತಗುಲುವುದರಿಂದ ರಾಜ್ಯದಲ್ಲಿ ಇದೇ ಪ್ರಥಮಬಾರಿಗೆ ರೋಪ್ ಬ್ಯಾರಿಯರ್ ಅಳವಡಿಸಲಾಗಿದೆ. 13 ಅಡಿ ಉದ್ದದ 1.5 ಟನ್ ತೂಕದ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಿಮೆಂಟ್ ಕಂಬಗಳನ್ನು ನಿರ್ಮಿಸಿ ಅದನ್ನು ಭೂಮಿಯಿಂದ 5 ಅಡಿ ಆಳದಲ್ಲಿ ನೆಡಲಾಗುತ್ತದೆ. ನಾಗರಹೊಳೆಯಲ್ಲಿ ಪ್ರಥಮ ಪ್ರಯೋಗ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಕಾಡಿನಿಂದ ನಾಡಿಗೆ ಆನೆಗಳ ದಾಳಿ ತಡೆಗೆ ರೈಲ್ವೆ ಹಳಿಗಳ ಬ್ಯಾರಿಕೇಡ್, ಸೋಲಾರ್ ತಂತಿ ಬೇಲಿ ಸೇರಿದಂತೆ ಹಲವು ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ. ಈಗ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದು ಇದರಿಂದ ಆನೆಗಳು ನಾಡಿಗೆ ಆಗಮಿಸುವುದನ್ನು ತಡೆಯಲು ಸಹಕಾರಿಯಾಗುತ್ತದೆ ಎಂದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಇದೊಂದು ಹೊಸತನದ ಪ್ರಯೋಗವಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.