ಮನೆ ರಾಜ್ಯ ಇಂಧನ ಇಲಾಖೆ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಕ್ರಮ: ಸಚಿವ ಸುನಿಲ್ ಕುಮಾರ್

ಇಂಧನ ಇಲಾಖೆ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಕ್ರಮ: ಸಚಿವ ಸುನಿಲ್ ಕುಮಾರ್

0

ಬೆಂಗಳೂರು(Bengaluru): ಇಂಧನ ಇಲಾಖೆಯ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.

ಕರ್ನಾಟಕ ಇವಿ ಜಾಗೃತಿ ಪೋರ್ಟಲ್ ಮತ್ತು ಬೆಂಗಳೂರು ನಗರವನ್ನು ಜಾಗತಿಕ ಇವಿ ವಲಯವನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಇಂಧನ ಇಲಾಖೆ ಅಧೀನದಲ್ಲಿ ಬರುವ ಎಲ್ಲ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಮೂರು ತಿಂಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.

ವಿದ್ಯುತ್ ಚಾಲಿತ ವಾಹನಗಳ ಬೆಲೆ, ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬೆಲೆಗಿಂತ ದುಬಾರಿ ಇರುವುದರಿಂದ, ಇಲೆಕ್ಟ್ರಿಕ್ ವಾಹನ ಬಳಕೆಗೆ ಇನ್ನೂ ಒಪ್ಪಿಗೆ ದೊರೆತಿಲ್ಲ. ಇಲೆಕ್ಟ್ರಿಕ್ ವಾಹನ ಬಳಸುವುದು ನಮ್ಮ ಇಲಾಖೆಯ ಆದ್ಯತೆ ಆಗಿದ್ದು, ಹಣಕಾಸು ಇಲಾಖೆ ಸಮ್ಮತಿಸಿದರೆ, ಮುಂದಿನ ದಿನಗಳಲ್ಲಿ ಇಂಧನ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುವುದು ಎಂದು ಹೇಳಿದರು.

ಇವಿ ಚಾರ್ಜಿಂಗ್ ಸೆಂಟರ್​​ಗಳ ಅಭಿಯಾನ: ರಾಜ್ಯದಲ್ಲಿ ಇಲೆಕ್ಟ್ರಿಕ್ ವಾಹನ ಬಳಕೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಜೂ.23 ರಿಂದ ಜೂ. 30ರವರೆಗೆ ರಾಜ್ಯದಲ್ಲಿ ಇವಿ ಚಾರ್ಜಿಂಗ್ ಸೆಂಟರ್​​ಗಳ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

3000 ಚಾರ್ಜಿಂಗ್ ಸ್ಟೇಷನ್: ಕರ್ನಾಟಕದಲ್ಲಿ 1000ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್​​ಗಳಿದ್ದು, 3000 ಚಾರ್ಜಿಂಗ್ ಸ್ಟೇಷನ್​​​​ಗಳ ಗುರಿ ಹೊಂದಲಾಗಿದೆ. ಇನ್ನು ನಗರದಲ್ಲಿ ಚಾರ್ಜಿಂಗ್ ಸ್ಟೇಷನ್​​ಗಳ ನಿರ್ಮಾಣಕ್ಕೆ ಟೆಂಡರ್ ಕರೆಯುವ ಹೊಣೆಯನ್ನು ಬೆಸ್ಕಾಂಗೆ ನೀಡಲಾಗಿದೆ. ಚಾರ್ಜಿಂಗ್ ಸ್ಟೇಷನ್​​ಗಳ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.

ಬೆಸ್ಕಾಂನಿಂದ ಇವಿ ಚಾರ್ಜಿಂಗ್ ಸ್ಟೇಷನ್: ಬೆಸ್ಕಾಂ ಆಡಳಿತ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಬೆಸ್ಕಾಂ ಸಾರ್ವಜನಿಕರಿಗಾಗಿ ಇವಿ ಚಾರ್ಜಿಂಗ್ ಸ್ಟೇಷನ್​​ಗಳನ್ನು ತೆರೆದಿದೆ. ಎರಡು ಚಾರ್ಜಿಂಗ್ ಸ್ಟೇಷನ್​​ಗಳನ್ನು ಬೆಸ್ಕಾಂನ ನಿಗಮ ಕಚೇರಿಗಳಲ್ಲಿ ತೆರೆಯಲಾಗಿದೆ ಎಂದರು.

6 ಸಾವಿರಕ್ಕೂ ಹೆಚ್ಚು ವಹಿವಾಟು: ಪ್ರಸ್ತುತವಿರುವ ಬೆಸ್ಕಾಂ ಚಾರ್ಜಿಂಗ್ ಸ್ಟೇಷನ್ ಗಳಿಂದ ತಿಂಗಳಿಗೆ 6 ಸಾವಿರಕ್ಕೂ ಹೆಚ್ಚು ವಹಿವಾಟು ನಡೆಯುತ್ತಿದೆ. ಸುಮಾರು 30,000 ಕಿ.ವ್ಯಾಟ್ ಇಂಧನ ಮಾರಾಟ ಮಾಡಿ, 2.5 ಲಕ್ಷ ರೂ, ಆದಾಯ ಗಳಿಸುತ್ತಿದೆ ಎಂದು ಮಾಹಿತಿ ನೀಡಿದರು.