chased even DC ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳವಾಗಿದ್ದು, ಜನರು ರಸ್ತೆಯಲ್ಲಿ ಒಡಾಡುವುದಕ್ಕೂ ಭಯ ಪಡುವಂತಾಗಿದೆ. ದಾವಣಗೆರೆ ಜಿಲ್ಲಾಧಿಕಾರಿಗಳನ್ನೇ ಬಿಡದೇ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬಂದಿದ್ದು, ಅವುಗಳನ್ನು ಕಲ್ಲು ಹೊಡೆದು ಓಡಿಸಿದ್ದೇನೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಜಿ.ಎಂ ಗಂಗಾಧರಸ್ವಾಮಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ಜಿಲ್ಲೆಯಲ್ಲಿ ವರ್ಷಕ್ಕೆ 5 ರಿಂದ 6 ಸಾವಿರ ಜನರು ಬೀದಿ ನಾಯಿಗಳ ದಾಳಿಗೆ ತುತ್ತಾಗುತ್ತಿದ್ದಾರೆ. ನನಗೂ ಅದರ ಅನುಭವ ಆಗಿದೆ. ಬೆಳಿಗ್ಗೆ ಜಾಗಿಂಗ್ ಹೋಗುತ್ತಿದ್ದಾಗ ಐದಾರು ನಾಯಿಗಳು ನನ್ನನ್ನು ಅಟ್ಟಾಡಿಸಿಕೊಂಡು ಬಂದಿದ್ದವು. ಅವುಗಳನ್ನು ನಾನು ಕಲ್ಲು ತೆಗೆದುಕೊಂಡು ಓಡಿಸಿದ್ದೆ ಎಂದು ಹೇಳಿದ್ದಾರೆ.
ಈಗಾಗಲೇ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಸಭೆ ಕರೆಯಲಾಗಿದೆ. ನಗರ ಹಾಗೂ ತಾಲೂಕು ಮಟ್ಟದಲ್ಲಿ ಕೂಡ ಸಭೆ ನಡೆಸಲಾಗಿದೆ. ಏಡ್ಸ್ ಕಾಯಿಲೆ ಬಂದರೂ 10-50 ವರ್ಷ ಮನುಷ್ಯ ಬದುಕುತ್ತಾನೆ. ಆದರೆ ನಾಯಿ ಕಡಿತ ಅದಕ್ಕಿಂತ ಗಂಭೀರವಾದದ್ದು. ಅದಕ್ಕೆ ಔಷಧಿಯೇ ಇಲ್ಲ ಹಾಗಾಗಿ ತಡೆಗಟ್ಟಲು ಅಗತ್ಯವಾದ ಕ್ರಮ ಕೈಗೊಳ್ಳಲಾಗಿದೆ. ನಾಯಿಗಳನ್ನು ಕೊಲ್ಲಲು ಬರುವುದಿಲ್ಲ. ಹಾಗಾಗಿ ಎನ್‌ಜಿಒ ಜೊತೆ ಮಾತನಾಡಲಾಗಿದೆ ಅವುಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.















