ಮನೆ ರಾಜ್ಯ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಕಠಿಣ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್​

ಬೆಂಗಳೂರಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಕಠಿಣ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್​

0

ಬೆಂಗಳೂರು: ನಗರದಲ್ಲಿ ಕಟ್ಟಡಗಳ ಫಿಟ್ನೆಸ್ ಪ್ರಮಾಣ ಪತ್ರ, ವಿನ್ಯಾಸ ಸೇರಿದಂತೆ ಪಾಲಿಕೆಯಿಂದ ಅನುಮತಿ ತೆಗೆದುಕೊಳ್ಳದೇ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಆದಷ್ಟು ಬೇಗ ಇದರ ಬಗ್ಗೆ ಸಮೀಕ್ಷೆ ಕಾರ್ಯ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ತಿಳಿಸಿದರು.

Join Our Whatsapp Group

ನಗರದ ಬಾಬುಸಾಬ್​ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿರುವ ಸ್ಥಳಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​ ಅವರು ಸಚಿವರಾದ ಸಂತೋಷ್​ ಲಾಡ್, ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್​ ಅವರ ಜೊತೆ ಭೇಟಿ ನೀಡಿ ರಕ್ಷಣಾ ಕಾರ್ಯವನ್ನು ವೀಕ್ಷಣೆ ಮಾಡಿದರು. ರಕ್ಷಣಾ ಕಾರ್ಯ ಹಾಗೂ ಕಾರ್ಮಿಕರ ಬಗ್ಗೆ ಚರ್ಚೆ ನಡೆಸಿದರು.

ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ, 60/40 ಅಳತೆಯ ನಿವೇಶನದಲ್ಲಿ ಇಷ್ಟು ದೊಡ್ಡ ಕಟ್ಟಡ ಕಟ್ಟಿರುವುದು ದೊಡ್ಡ ಅಪರಾಧ. ಅಧಿಕಾರಿಗಳು ಮೂರು ಬಾರಿ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ನೋಟೀಸ್ ನೀಡಿದರೆ ಸಾಲದು ಅದರ ಬದಲು ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಇದು ನಮಗೆ ದೊಡ್ಡ ಪಾಠವಾಗಿದೆ. ರಕ್ಷಣಾ ಕಾರ್ಯ ಮುಗಿದ ನಂತರ ಮುಂದಿನ ಎರಡು ದಿನಗಳಲ್ಲಿ ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ನಗರದಾದ್ಯಂತ ಅಕ್ರಮ ಕಟ್ಟಡಗಳ ಬಗ್ಗೆ ಸರ್ವೆ ಕಾರ್ಯ ಮಾಡಲಾಗುವುದು. ಕಟ್ಟಡ ವಿನ್ಯಾಸ ಹೊಂದಿರದವರಿಗೆ ಯಾವುದೇ ಕಾರಣಕ್ಕೂ ನೋಂದಣಿ ಮಾಡಿಕೊಡಬಾರದು ಎಂದು ಕಂದಾಯ ಇಲಾಖೆಗೆ ಸೂಚನೆ ನೀಡಲಾಗುವುದು. ಕಡಿಮೆ ದುಡ್ಡಿಗೆ ನಿವೇಶನ ತೆಗೆದುಕೊಂಡು ಮಾರಾಟ ಮಾಡಲು ಈ ರೀತಿ ಮಾಡಲಾಗುತ್ತದೆ. ಇಂತಹ ಅಕ್ರಮಗಳನ್ನು ತಡೆಗಟ್ಟುವ ಕಾರಣಕ್ಕಾಗಿ ರೇರಾ ಕಾಯ್ದೆ ಜಾರಿಯಲ್ಲಿದೆ ಎಂದರು.

21 ಕಾರ್ಮಿಕರರು ಕಟ್ಟಡದ ಅವಶೇಷಗಳ ಮಧ್ಯೆ ಸಿಲುಕಿದ್ದಾರೆ. ಇಬ್ಬರು ಕಾರ್ಮಿಕರು ಮೃತ ಪಟ್ಟಿದ್ದಾರೆ. 14 ಜನರ ರಕ್ಷಣೆ ಮಾಡಲಾಗಿದ್ದು, ಏಳು ಮಂದಿ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್​ಡಿಆರ್​ಎಫ್​ ಮತ್ತು ಎಸ್​​ಡಿಆರ್​ಎಫ್​ ತಂಡದವರು ಅತ್ಯಂತ ಜಾಗರೂಕವಾಗಿ ತರಾತುರಿಯಲ್ಲಿ ರಕ್ಷಣಾ ಕೆಲಸ ಮಾಡುತ್ತಿದ್ದಾರೆ. ಆಂಧ್ರ ಮತ್ತು ಬಿಹಾರ್​ ರಾಜ್ಯದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಮೃತಪಟ್ಟಿರುವ ಒಬ್ಬ ಕಾರ್ಮಿಕರ ಗುರುತು ಸಿಕ್ಕಿದ್ದು, ಆತ ಬಿಹಾರದವರುಎಂದು ತಿಳಿದು ಬಂದಿದೆ ಎಂದು ತಿಳಿಸಿದರು.

ಕಟ್ಟಡ ನಿರ್ಮಾಣ ಗುತ್ತಿಗೆದಾರ, ನಿವೇಶನದ ಮಾಲೀಕ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ರಕ್ಷಣೆ ಕಾರ್ಯ ಮುಗಿದ ನಂತರ ಕಾರ್ಮಿಕರಿಗೆ ಪರಿಹಾರವನ್ನು ಕೊಡಲಾಗುವುದುಎಂದು ಡಿಸಿಎಂ ಭರವಸೆ ನೀಡಿದರು.

ನಿರೀಕ್ಷೆಗೂ ಮೀರಿ ಹೆಚ್ಚಿನ ಮಳೆ ಸುರಿದಿದೆ. ಕೇಂದ್ರೀಯ ವಿಹಾರ ಬಡಾವಣೆಯಲ್ಲಿ ಏಳೆಂಟು ಕುಟುಂಬಗಳು ಕೆಳಗೆ ಬರದೇ ಬಾಗಿಲು ಮುಚ್ಚಿಕೊಂಡು ರಕ್ಷಣಾ ಕಾರ್ಯಕ್ಕೆ ಸಹಕರಿಸುತ್ತಿಲ್ಲ. ಏನಾದರೂ ಅವಘಡ ಆಗುವ ಮುಂಚಿತವಾಗಿ ಬಾಗಿಲನ್ನು ಒಡೆದು ಅವರನ್ನು ರಕ್ಷಿಸಿ ಎಂದು ಸೂಚನೆ ನೀಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ತಿಳಿಸಿದರು.