ಕಠ್ಮಂಡು: ಮಂಗಳವಾರ(ಜ.7) ಮುಂಜಾನೆ ಭಾರತ ಸೇರಿದಂತೆ ಮೂರು ದೇಶಗಳಲ್ಲಿ ಏಕಕಾಲದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಟಿಬೆಟ್‌ನಲ್ಲಿ ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.1 ಎಂದು ಅಳೆಯಲಾಗಿದೆ.
ನ್ಯಾಷನಲ್ ಸೆಂಟರ್ ಫಾರ್ ಸೆಸ್ಮಾಲಜಿ (ಎನ್‌ಸಿಎಸ್) ಪ್ರಕಾರ, ಭೂಕಂಪವು ಟಿಬೆಟ್‌ನ ಕ್ಸಿಜಾಂಗ್‌ನಲ್ಲಿ ಬೆಳಿಗ್ಗೆ 6:35ಕ್ಕೆ 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ. ಭಾರತ, ಭೂತಾನ್ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿದೆ.
ಭೂಕಂಪದ ಪ್ರಭಾವ ಮೂರೂ ದೇಶಗಳ ಮೇಲೆ ಪ್ರಭಾವ ಬೀರಿದ್ದು ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ಯಾವುದೇ ವರದಿಯಾಗಿಲ್ಲ. ಟಿಬೆಟ್‌ನಲ್ಲಿ ಹಲವಾರು ಬಾರಿ ಕಂಪನದ ಅನುಭವಾಗಿತ್ತು ಎಂದು ಹೇಳಲಾಗಿದೆ ಈ ವೇಳೆ ಮನಯೊಳಗಿದ್ದ ಮನೆಮಂದಿ ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಮಾಹಿತಿ ಪ್ರಕಾರ ನೈಋತ್ಯ ಚೀನಾದ ಶಿಜಾಂಗ್ ಪ್ರದೇಶದಲ್ಲಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ನಂತರ ಮತ್ತೆ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಅರ್ಧ ಗಂಟೆಯೊಳಗೆ ಒಂದರ ಹಿಂದೆ ಒಂದರಂತೆ ಮೂರು ಬಾರಿ ಭೂಕಂಪನದ ಅನುಭವವಾಗಿದೆ ಎಂದು ಹೇಳಲಾಗಿದೆ. ಭಾರತದಲ್ಲೂ ಭೂಮಿ ಕಂಪಿಸಿದ್ದು ದೆಹಲಿ-ಎನ್‌ಸಿಆರ್ ಮತ್ತು ಬಿಹಾರದ ಕೆಲವು ಭಾಗಗಳು ಸೇರಿದಂತೆ ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ, ಜನರು ತಮ್ಮ ಮನೆಯೊಳಗಿನ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಭೂಕಂಪದಿಂದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.