ಮನೆ ರಾಜ್ಯ ಉಡುಪಿ: ಕಾಲು ಸಂಕ ದಾಟುವಾಗ ನೀರಿಗೆ ಬಿದ್ದಿದ್ದ ವಿದ್ಯಾರ್ಥಿನಿ ಮೃತದೇಹ ಪತ್ತೆ

ಉಡುಪಿ: ಕಾಲು ಸಂಕ ದಾಟುವಾಗ ನೀರಿಗೆ ಬಿದ್ದಿದ್ದ ವಿದ್ಯಾರ್ಥಿನಿ ಮೃತದೇಹ ಪತ್ತೆ

0

ಉಡುಪಿ (Udupi):  ಆಗಸ್ಟ್‌ 8 ರಂದು ಕಾಲು ಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ ವಿದ್ಯಾರ್ಥಿನಿ ಸನ್ನಿಧಿಯ ಮೃತದೇಹ ಇಂದು ಪತ್ತೆಯಾಗಿದೆ.

ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ನೀರುಪಾಲಾಗಿದ್ದ ಬಾಲಕಿ ಸನ್ನಿಧಿಯ ಮೃತದೇಹ ಘಟನೆ ನಡೆದ ಜಾಗದಿಂದ ಸುಮಾರು 300 ಮೀಟರ್ ದೂರದಲ್ಲಿ ಪತ್ತೆಯಾಗಿದೆ.   

ನೀರುಪಾಲಾಗಿದ್ದ ಬಾಲಕಿ ಸನ್ನಿಧಿಗಾಗಿ ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ದಳ, ಮೀನುಗಾರರು ಮತ್ತು ಸ್ಥಳೀಯರಿಂದ ಶೋಧಕಾರ್ಯ ನಡೆಯುತ್ತಿತ್ತು. ಕೊನೆಗೂ ಇಂದು ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ ಉಸ್ತುವಾರಿ ಸಚಿವ ಅಂಗಾರ ಅವರು ಮೃತ ಬಾಲಕಿಯ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ.

ಬೊಳಂಬಳ್ಳಿ ಗ್ರಾಮದ ನಿವಾಸಿಗಳಾದ ಮಕ್ಕಿಮನೆ ಪ್ರದೀಪ್ ಪೂಜಾರಿ, ಸುಮಿತ್ರಾ ದಂಪತಿಗಳ ಪುತ್ರಿ ಸನ್ನಿಧಿ ಚಪ್ಪರಿಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸನ್ನಿಧಿ ಶಾಲೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಕಾಲು ಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಳು. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.