ಮೈಸೂರು(Mysuru): ವಿದ್ಯಾರ್ಥಿಗಳು ಕಾಲೇಜು ರಾಜಕೀಯಕ್ಕೆ ಬಲಿಯಾಗದೆ ಕಷ್ಟಪಟ್ಟು ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.
ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ಐಟಿಸಿ ಕಂಪನಿ ವತಿಯಿಂದ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನನಗೆ ಮೈಸೂರು ವಿವಿಯಲ್ಲಿ ಕಲಿಯುವ ಅವಕಾಶ ಸಿಗಲಿಲ್ಲ. ಆದರೆ ಸಂಸದನಾಗಿ ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಹಾಗಾಗಿ ಮಕ್ಕಳಿಗೆ ಸಹಾಯ ಮಾಡುವುದು ನನ್ನ ಆದ್ಯ ಕರ್ತವ್ಯ. ಸದ್ಯ ಒಬಿಸಿ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಸಿಗುವಂತೆ ಮಾಡಿದೆ. ಇದೀಗ ಗುಣಮಟ್ಟದ ಲ್ಯಾಪ್ ಟಾಪ್ ವಿತರಿಸಲಾಗುತ್ತಿದೆ. ಆದರೆ, ವಿದ್ಯಾರ್ಥಿಗಳೇ ಜಾತಿ ಮನಸ್ಥಿತಿಯಿಂದ ನೀವು ಹೊರ ಬನ್ನಿ. ಕೇವಲ ವಿದ್ಯಾರ್ಥಿ ಆಗಿ ಮೈಸೂರು ವಿವಿಗೆ ಬನ್ನಿ. ನಾನು ಗೌಡ, ಎಸ್ ಸಿ, ಲಿಂಗಾಯತ ಅಂತ ಬರಬೇಡಿ ಎಂದು ಹೇಳಿದರು.
ವಿವಿ ರಾಜಕೀಯಕ್ಕೆ ಬಲಿಯಾಗಬೇಡಿ. ವಿವಿಯಲ್ಲಿ ಎಲ್ಲ ಅವರವರ ಜಾತಿಯವರನ್ನು ರಕ್ಷಿಸುತ್ತಿದ್ದಾರೆ. ಮೈಸೂರಿಗೆ ಒಂದು ಇನ್ ಕ್ಯೂಬಿಷನ್ ಸೆಂಟರ್ ಇಲ್ಲ. 81 ಕೋಟಿಯಲ್ಲಿ ಪ್ಲಾನಿಟೋರಿಯಂ ಬರುತ್ತಿದೆ. ವಿದ್ಯಾರ್ಥಿಗಳಿಗೆ ಕಾಲೇಜು ದಿನದಲ್ಲಿ ಯಾವ ಸಿದ್ಧಾಂತ ವಿಚಾರದ ಬಗ್ಗೆ ಜ್ಞಾನ ಇರುವುದಿಲ್ಲ. ರಾಜಕೀಯದಿಂದ ದೂರ ಇರಿ. ಕಷ್ಟಪಟ್ಟು ಓದಿ. ಜಾತಿ ಮೀರಿ ಬನ್ನಿ. ಎಲ್ಲರೂ ಒಂದಾಗಿ ವಿದ್ಯಾಭ್ಯಾಸ ಮಾಡಿ ಎಂದು ಕಿವಿಮಾತು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕುಲಸಚಿವ ಪ್ರೊ.ಆರ್. ಶಿವಪ್ಪ, ಐಟಿಸಿ ಅಸಿಸ್ಟೆಂಟ್ ಮ್ಯಾನೇಜರ್ ಪೂರ್ಣೇಶ್ ಎ.ಎಸ್., ಸಿಂಡಿಕೇಟ್ ಸದಸ್ಯರಾದ ಡಾ.ಈ.ಸಿ.ನಿಂಗರಾಜು, ಡಾ.ಚೈತ್ರ ನಾರಾಯಣ್, ಒಬಿಸಿ ಸೆಲ್ ಸಂಯೋಜಕ ಪ್ರೊ.ಬಿ.ವಿ.ಸುರೇಶ್ ಕುರ್ಮಾ, ಹಿಂದುಳಿದ ವರ್ಗಗಳ ವೇದಿಕೆ ಸದಸ್ಯ ಡಾ.ಗಪ್ಪಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.