ಬೆಂಗಳೂರು: ಪಿಯು-ಪದವಿ ಕಾಲೇಜುಗಳು ಪುನಾರಂಭವಾದ ಮೊದಲ ದಿನವೇ ಹೈಕೋರ್ಟ್ ಆದೇಶದ ನಡುವೆಯೂ ರಾಜ್ಯದ ವಿವಿಧೆಡೆ ಅನೇಕ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದರಿಂದ ಮತ್ತೆ ವಿವಾದ ತೀವ್ರಗೊಂಡಿದೆ.
ಸೂಕ್ಷ್ಮ ಸ್ಥಳಗಳಲ್ಲಿರುವ ಪಿಯು ಹಾಗೂ ಪದವಿ ಕಾಲೇಜುಗಳ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಈ ನಡುವೆಯೇ ಕಾಲೇಜಿಗೆ ಬುರ್ಖಾ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ನಿರಾಕರಿಸಿದ ಘಟನೆಗಳು ಕಂಡು ಬಂದಿತು.
ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ, ಕಾಲೇಜು ಆಡಳಿತ ಮಂಡಳಿ ಕಾಲೇಜಿಗೆ ರಜೆಯನ್ನು ಘೋಷಿಸಿದೆ.
ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಕಾಲೇಜಿನ ಮುಖ್ಯದ್ವಾರದ ಹೊರಗೆ ನಿಂತಿದ್ದ ಬಾಲಕಿಯರು ಮಾತನಾಡಿ, ಸರ್ಕಾರದ ಯಾವುದೇ ಆದೇಶಕ್ಕಿಂತ ನಮಗೆ ನಮ್ಮ ನಂಬಿಕೆಯೇ ಮುಖ್ಯ ಎಂದು ಹೇಳಿದ್ದಾರೆ.
ಇಂದು ಟೆಸ್ಟ್ ಇತ್ತು. ಆದರೆ, ನಮಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿಲ್ಲ. ನಮಗೆ ಶಿಕ್ಷಕ್ಕಿಂತಲೂ ನಮ್ಮ ನಂಬಿಕೆ ಮುಖ್ಯ. ಆ ನಂಬಿಕೆಯಲ್ಲಿ ಬುರ್ಖಾ ಕೂಡ ಒಂದು ಭಾಗವಾಗಿದೆ. ಅದನ್ನು ನಾವು ತೆಗೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಹಿಜಾಬ್ ತೆಗೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿಜಯಪುರ, ಬಿಜಾಪುರ, ಕಲಬುರಗಿ ಹಾಗೂ ಯಾದಗಿರಿಯ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಕಾಲೇಜು ಪ್ರವೇಶಕ್ಕೆ ನಿರಾಕರಿಸಿದ ಘಟನೆಗಳು ನಡೆದಿವೆ.
ತರಗತಿಯಲ್ಲಿ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡಿದ್ದರು. ಆದರೆ, ಅದಕ್ಕೆ ಅನುಮತಿ ನೀಡಲಾಗಿರಲಿಲ್ಲ. ನಂತರ ಕ್ಯಾಂಪಸ್’ಗೆ ಹಿಜಾಬ್ ಧರಿಸಿ ಬರಲು ಆರಂಭಿಸಿದ್ದರು. ನಂತರ ತರಗತಿ ವೇಳೆ ಹಿಜಾಬ್ ತೆಗೆದು ಕುಳಿತುಕೊಳ್ಳಲು ಆರಂಭಿಸಿದ್ದರು. ಕಾಲೇಜಿನಲ್ಲಿ ಕಳೆದ 35 ವರ್ಷಗಳಿಂದಲೂ ಯಾರೊಬ್ಬರೂ ಹಿಜಾಬ್ ಧರಿಸಿ ಬಂದಿರಲಿಲ್ಲ. ಆಗ್ರಹ ಹಾಗೂ ಮನವಿ ಮಾಡಿದ್ದ ಕೆಲವು ವಿದ್ಯಾರ್ಥಿಗಳ ಹಿಂದೆ ಕೆಲವು ಸಂಘಟನೆಗಳಿವೆ ಎಂದು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಅವರು ಹೇಳಿದ್ದಾರೆ.