ಕಲಬುರಗಿ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ(ಕೆಎಸ್’ಡಿಎಲ್) ಅಧ್ಯಕ್ಷ ಹಾಗೂ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಕ್ರಮಕ್ಕೆ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಗೆ ವರದಿ ಸಲ್ಲಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕ್ಷಮಿಸಲಾರದಂತಹ ಅಕ್ರಮ ಎಸಗಿ ತಪ್ಪು ಮಾಡಿದ್ದಾರೆ. ಹೀಗಾಗಿ ಅವರ ಬಂಧನ ಆಗಲೇಬೇಕು. ಅವರ ವಿರುದ್ಧ ಕ್ರಮತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಕೆಎಸ್’ಡಿಎಲ್’ಗೆ ರಾಸಾಯನಿಕ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ₹ 40 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ, ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪ್ರಶಾಂತ್ ಅವರು ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ. ವಿರೂಪಾಕ್ಷಪ್ಪ ಕೂಡ ಆರೋಪಿ ಎಂದು ಈ ಪ್ರಕರಣದ ಎಫ್’ಐಆರ್’ನಲ್ಲಿ ಹೆಸರಿಸಲಾಗಿದ್ದು, ಪ್ರಕರಣದ ಬಳಿಕ ಮಾಡಾಳ್ ಅವರು ನಾಪತ್ತೆ ಆಗಿದ್ದಾರೆ.