ಮನೆ ರಾಜ್ಯ ಗ್ರಂಥಾಲಯಗಳಲ್ಲಿ ಯಶಸ್ವಿ ಬೇಸಿಗೆ ಶಿಬಿರ: ಗ್ರಾಮೀಣ ಮಕ್ಕಳಿಂದ ಮೂಡಿದ ಮಣ್ಣಿನ ಮಡಿಕೆ, ಕಲಾಕೃತಿಗಳು

ಗ್ರಂಥಾಲಯಗಳಲ್ಲಿ ಯಶಸ್ವಿ ಬೇಸಿಗೆ ಶಿಬಿರ: ಗ್ರಾಮೀಣ ಮಕ್ಕಳಿಂದ ಮೂಡಿದ ಮಣ್ಣಿನ ಮಡಿಕೆ, ಕಲಾಕೃತಿಗಳು

0

ಮೈಸೂರು: ಸಹಜವಾಗಿ ಬೇಸಿಗೆ ಶಿಬಿರ ಎಂದಾಕ್ಷಣ ರಂಗಾಯಣ, ನಗರದ ಹಲವೆಡೆ ನಡೆಯುವ ನಾನಾ ವಿಧವಾದ ಚಿಣ್ಣರ ಮೇಳಗಳು ಕಣ್ಣ ಮುಂದೆ ಬರುತ್ತವೆ. ಆದರೆ, ಸರ್ಕಾರದ ನಿರ್ದೇಶನದಂತೆ ಗ್ರಂಥಾಲಯಗಳಿಂದ ಆಯೋಜಿಸಿದ್ದ ಬೇಸಿಗೆ ಶಿಬಿರ ಯಶಸ್ವಿಯಾಗಿದ್ದು, ಹಳ್ಳಿ ಮಕ್ಕಳ ಪ್ರತಿಭೆಯೂ ಅನಾವರಣಗೊಂಡು ಮಕ್ಕಳಲ್ಲೂ ಕಲರವ ತರಿಸುವಲ್ಲಿ ಯಶಸ್ವಿಯಾಗಿದೆ. 

Join Our Whatsapp Group

ಜಿಲ್ಲೆಯ 256 ಗ್ರಂಥಾಲಯಗಳಲ್ಲಿಯೂ ಇಂತಹದೊಂದು ಆಕರ್ಷಕ, ವಿಭಿನ್ನ ಪ್ರಯೋಗದ ಚಿಣ್ಣರ ಬೇಸಿಗೆ ಶಿಬಿರ ಎಲ್ಲರ ಗಮನ ಸೆಳೆದಿದೆ. ಮಾತ್ರವಲ್ಲದೆ, ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡ ಮಕ್ಕಳು ಸಹ ತಮ್ಮಲ್ಲಿರುವ ನಾನಾ ಕೌಶಲಗಳನ್ನು ಶಿಬಿರ ಮೂಲಕ ಹೊರಹಾಕಿ ನಕ್ಕು ನಲಿದಿದ್ದಾರೆ. ಮಾತ್ರವಲ್ಲದೆ ಶಿಕ್ಷಕರ ಹೊರತಾಗಿಯೂ ಇಂತಹದೊಂದು 8 ದಿನಗಳ ವಿಭಿನ್ನ ಕಾರ್ಯಕ್ರಮ ಮಕ್ಕಳಲ್ಲಿಯೂ ಸಂತಸ ಮೂಡಿಸುವ ಜತೆಗೆ ಇದನ್ನು ಕಂಡ ಪೋಷಕರಿಗೂ ಖುಷಿಕೊಟ್ಟಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಹಲವು ಮಕ್ಕಳ ಸ್ನೇಹಿ ಚಟುವಟಿಕೆಗಳನ್ನು ನಡೆಸುತ್ತಿರುವಂತೆ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಗ್ರಂಥಾಲಯಗಳ ಮೇ19 ರಿಂದ 27 ರವರೆಗೆ ಎಲ್ಲೆಡೆ ನಡೆಸಲಾಯಿತು.

ನಿತ್ಯ ಬೆ.10 ರಿಂದ 1.30ಗಂಟೆಯವರೆಗೆ 8 ರಿಂದ 13 ವರ್ಷ ವಯಸ್ಸಿನ 40 ಮಕ್ಕಳಿಗೆ ಗ್ರಾಮ ಪಂಚಾಯಿತಿ ಕೇಂದ್ರ ಹಾಗೂ ಸರ್ಕಾರಿ ಶಾಲೆ, ಗ್ರಂಥಾಲಯಗಳಲ್ಲಿ ಚಟುವಟಿಕೆ ರೂಪಿಸಲಾಗಿತ್ತು.

ಗ್ರಂಥಪಾಲಕರು ಮತ್ತು ಸ್ವಯಂ ಸೇವಕರೊಂದಿಗೆ ಆಸಕ್ತ ಶಾಲಾ ಶಿಕ್ಷಕರು/ ನಿವೃತ್ತ ಶಾಲಾ ಶಿಕ್ಷಕರು/ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು/ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು/ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಸಲಾಯಿತು. ಶಿಬಿರದ ಪೂರ್ಣ ಮೇಲುಸ್ತುವಾರಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿರ್ವಹಿಸಿದ್ದರು.

ಓದುವ-ಬರೆಯುವ, ಅಂಕಿಸಂಖ್ಯೆ, ವಿಜ್ಞಾನ ವಿಷಯಗಳು, ನಾಯಕತ್ವ ಮತ್ತು ಸಂವಹನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ಉದ್ದೇಶ, ಪರಿಸರ ಕಾಳಜಿ, ಸಾಮಾಜಿಕ ಕಾಳಜಿ ಬೆಳಸುವುದು. ಸ್ಥಳೀಯ ಸಂಸ್ಕೃತಿ, ಜೀವನ ಶೈಲಿ, ಇತಿಹಾಸ ಅಂಶಗಳನ್ನು ತಿಳಿಸ ಪಡುವುದು. ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವುದು. ಈ ಮೂಲಕ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಲು ಮಕ್ಕಳನ್ನು ಪ್ರೇರೇಪಿಸುವ ಪ್ರಯತ್ನ ಸಹ ನಡೆದಿದೆ. 

ಏನೆಲ್ಲಾ ಚಟುವಟಿಕೆ: ಮಕ್ಕಳಿಂದ ದಿನಪತ್ರಿಕೆ, ನಿಯತಕಾಲಿಕಗಳನ್ನು ಓದಿಸುವುದು, ಚಿತ್ರ ಬಿಡಿಸುವುದು, ಕಥೆ ಕಟ್ಟುವುದು ಹಾಗೂ ನಿಧಿ ಶೋಧ, ಗಟ್ಟಿ ಓದು ಮತ್ತು ಪತ್ರ ಬರವಣಿಗೆಗೆಯಂತಹ ಚಟುವಟಿಕೆ ನಡೆಸುವುದು. ವಿಜ್ಞಾನದ ಕಾಮನಬಿಲ್ಲು ಮೂಡಿಸುವಿಕೆ, ವಿವಿಧ ಗಣಿತದ ಘನಾಕೃತಿಗಳ ಪರಿಚಯ, ಚಿನ್ನಿ ದಾಂಡು, ಗ್ರಾಮದಲ್ಲಿ ಬಳಸುವ ಆಳತೆ ಮತ್ತು ಮಾವಕಗಳು, ಟ್ಯಾನ್ಗ್ರಾಮ್, ಪೇವರ್ ಫ್ಯಾನ್, ಜೆಟ್ ಫೋನ್, ಕಣ್ಣು, ಮಿಟುಕಿಸುವ ಗೊಂಬೆ, ಚದುರಂಗ, ಕೇರಂ, ಆಕಾಶ ವೀಕ್ಷಣೆ ಮತ್ತಿತರೆ ಚಟುವಟಿಕೆಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳುವುದು.

ಆಯಾ ಊರಿನ ಪಕ್ಷಿ, ನೀರು, ಇತಿಹಾಸ, ಜಾತ್ರೆ, ಜನಪದ ಗೀತೆ, ಜನಪದ ಕಥೆ, ಕ್ರೀಡೆ ಹಾಗೂ ಕಲೆಗಳನ್ನು ಮಕ್ಕಳ ಮೂಲಕವೇ ಪರಿಚಯಿಸುವುದು. ಅಂಚೆ ಕಛೇರಿ, ಹಾಲು ಉತ್ಪಾದಕರ ಸಹಕಾರ ಸಂಘ, ಬ್ಯಾಂಕ್, ಪಶು ವೈದ್ಯಕೀಯ ಆಸ್ಪತ್ರೆ ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯಿತಿ, ಆಸ್ಪತ್ರೆ ಇತ್ಯಾದಿಗಳಿಗೂ ಭೇಟಿ ನೀಡಿ ಅಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆಯೂ ಪರಿಚಯಿಸಿಕೊಡುವುದು. ಜತೆಗೆ ಒಂದು ದಿನದ ಯೂ-ಟ್ಯೂಬ್ ತರಬೇತಿಯನ್ನು ನಡೆಸಿರುವುದು ಶಿಬಿರದ ವಿಶೇಷ.