ರಾಯಚೂರು : ಜಿಲ್ಲೆಯ ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದ ಮನೆಗಳಲ್ಲಿ ಏಕಾಏಕಿ ಭೂಮಿ ಕುಸಿದಿದ್ದು ಮನೆಯಲ್ಲೇ ಗುಂಡಿಗಳು ನಿರ್ಮಾಣವಾಗಿವೆ. ಗ್ರಾಮದಲ್ಲಿ ಕಳೆದ 1 ತಿಂಗಳಲ್ಲಿ ಐದು ಮನೆಗಳಲ್ಲಿ ಭೂ ಕುಸಿತವಾಗಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಗ್ರಾಮ ತಗ್ಗು ಪ್ರದೇಶದಲ್ಲಿದ್ದು ಗ್ರಾಮದ ಸುತ್ತಲೂ ನೀರಾವರಿ ಪ್ರದೇಶ ಇರುವುದರಿಂದ ನೀರಿನ ಬಸಿ ಉಂಟಾಗಿ ಭೂಮಿ ಕುಸಿಯುತ್ತಿದೆ ಅಂತ ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ರಾಜಶೇಖರ ರೆಡ್ಡಿ, ಗುರಪ್ಪ ಮೂಡಲಗಿರಿ, ಡಾ.ಕರಿಬಸಪ್ಪ,ರಮೇಶ, ಚನ್ನಬಸವ ಎನ್ನುವವರ ಮನೆಗಳಲ್ಲಿ ಭೂ ಕುಸಿತವಾಗಿದೆ.

ಅದೃಷ್ಟವಶಾತ್ ಭೂ ಕುಸಿತ ವೇಳೆ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡಿಯಲ್ಲಿ ಬಿದ್ದಿದ್ದ ಮಹಿಳೆಯೊಬ್ಬರನ್ನ ಮನೆಯವರೇ ಕಾಪಾಡಿದ್ದಾರೆ. ಕುಸಿದ ಭೂಮಿಯನ್ನ ಸರಿಪಡಿಸಿ ಗುಂಡಿಗಳನ್ನ ಮುಚ್ಚಿ ಜನ ಅಲ್ಲೇ ವಾಸಮಾಡುತ್ತಿದ್ದಾರೆ. ಗ್ರಾಮದಲ್ಲಿನ ಪರಸ್ಥಿತಿ ಬಗ್ಗೆ ಸಿಂಧನೂರು ತಾಲೂಕು ಆಡಳಿತ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಅಧಿಕಾರಿಗಳು ಹಿರಿಯ ಭೂ ವಿಜ್ಞಾನ ಇಲಾಖೆ, ಪಿಡಬ್ಲ್ಯೂಡಿ, ಪಿಆರ್‌ಇಡಿ ಇಲಾಖೆ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲು ತಾಲೂಕು ಆಡಳಿತ ಮುಂದಾಗಿದೆ. ಭೂಕುಸಿತವಾದ ಮನೆಗಳ ಮಾಲೀಕರಿಗೆ ಪರಿಹಾರ ನೀಡಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.















