ಹವಾಮಾನ ಬದಲಾವಣೆಗೆ ನಮ್ಮ ದೇಹ ಹೊಂದಿಕೊಳ್ಳಲು ಕೊಂಚ ಸಮಯ ಬೇಕಾಗುತ್ತದೆ. ಅದರಲ್ಲೂ ಈಗ ಚಳಿಗಾಲ ಆರಂಭವಾಗುತ್ತಿದೆ. ಮೈಕೊರೆಯುವ ಚಳಿಗೆ ದೇಹ ಕೆಲವೊಮ್ಮೆ ಅನಾರೋಗ್ಯಕ್ಕೆ ಒಳಗಾಗುತ್ತದೆ.
ಅದರಲ್ಲಿ ಮುಖ್ಯವಾಗಿ ಕೆಲವರಿಗೆ ಬೆಳಗ್ಗೆ ಎದ್ದಾಕ್ಷಣ ಸಿಕ್ಕಾಪಟ್ಟೆ ಸೀನು ಬರುವುದು, ಮೂಗಿನಲ್ಲಿ ಸೋರಿಕೆಯಾಗುವುದು ಕಂಡುಬರುತ್ತದೆ. ಇದನ್ನು ಆರಂಭದಲ್ಲಿಯೇ ನಿಯಂತ್ರಣ ಮಾಡುವುದು ಬಹಳ ಮುಖ್ಯ. ಏಕೆಂದರೆ ಬೆಳಗ್ಗಿನ ಶೀತ ಹಾಗೆಯೇ ಮುಂದುವರೆದರೆ ಅದು ಮುಂದೆ ಅಸ್ತಮಾಕ್ಕೆ ತಿರುಗುವ ಸಾಧ್ಯತೆ ಇರುತ್ತದೆ.
ಬೆಳಗ್ಗೆ 6 ಗಂಟೆಗೂ ಮೊದಲು ಏಳಿ
ಸಾಮಾನ್ಯವಾಗಿ ಚಳಿಯಲ್ಲಿ ಬೇಗ ಏಳುವುದು ಕಷ್ಟ. ಆದರೆ ಆರೋಗ್ಯ ಉತ್ತಮವಾಗಿರಬೇಕೆಂದರೆ ಬೇಗ ಏಳುವುದು ಬಹಳ ಒಳ್ಳೆಯದು. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ದೇಹದಲ್ಲಿ ಕಫ ಹೆಚ್ಚು ಉತ್ಪತ್ತಿಯಾಗುತ್ತದೆ. ಹೀಗಾಗಿ ತಡವಾಗಿ ಎದ್ದಾಗ ಹೆಚ್ಚು ಸೀನು ಬರಲು ಕಾರಣವಾಗುತ್ತದೆ ಎನ್ನುತ್ತದೆ ಆಯುರ್ವೇದ.
ಹೀಗಾಗಿ ಬೆಳಗ್ಗೆ ಸೀನು ಬರುವುದು, ಮೂಗಿನ ಸೋರಿಕೆಯಾಗುವುದನ್ನು ತಡೆಯಲು ಆದಷ್ಟು 6 ಗಂಟೆಗೂ ಮೊದಲೇ ಏಳಿ. ಎದ್ದು ಬಿಸಿ ನೀರಿನ ಸೇವನೆ, ಕೆಲವು ಯೋಗಾಸನಗಳನ್ನು ತಪ್ಪದೇ ಮಾಡಿ. ಇದರಿಂದ ದೇಹ ಆರೋಗ್ಯವಾಗಿರುತ್ತದೆ.
ರಾತ್ರಿ ಮೊಸರು ಸೇವಿಸಬೇಡಿ
ಕೆಲವರಿಗೆ ರಾತ್ರಿ ಮೊಸರನ್ನು ತಿನ್ನದೇ ನಿದ್ದೆ ಬರುವುದಿಲ್ಲ. ಆದರೆ ಆಯುರ್ವೇದದ ಪ್ರಕಾರ ರಾತ್ರಿ ಮೊಸರನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಇದು ದೇಹದಲ್ಲಿ ಆಮ ಎನ್ನುವ ಅಂಶವನ್ನು ಹೆಚ್ಚು ಮಾಡಿ, ಮೂಗಿನಲ್ಲಿ ದ್ರವ ಉತ್ಪತ್ತಿಯಾಗಲು ಕಾರಣವಾಗುತ್ತದೆ. ಹೀಗಾಗಿ ಬೆಳಗ್ಗೆ ಹೆಚ್ಚು ಸೀನು ಬರುತ್ತದೆ.
ಆದ್ದರಿಂದ ರಾತ್ರಿ ಆದಷ್ಟು ಲಘುವಾಗಿ ಊಟ ಮಾಡಿ ಮತ್ತು ಮೊಸರನ್ನು ಸೇವಿಸಬೇಡಿ. ಅಲ್ಲದೆ ಊಟವಾದ ತಕ್ಷಣ ಮಲಗಬೇಡಿ. ಮಲಗುವ 2 ಗಂಟೆಯ ಮೊದಲು ಆಹಾರ ಸೇವನೆ ಮಾಡುವುದು ಬಹಳ ಒಳ್ಳೆಯದು.
ಆಹಾರದಲ್ಲಿ ಸ್ವಲ್ಪ ಮಸಾಲೆ ಪದಾರ್ಥವಿರಲಿ
ಈಗಂತೂ ಚಳಿಗಾಲ, ರಾತ್ರಿ, ಬೆಳಗಿನ ಜಾವ ಹೆಚ್ಚು ಚಳಿ ಇರುತ್ತದೆ. ಹೀಗಾಗಿ ದೇಹವನ್ನು ಆಂತರಿಕವಾಗಿ ಬೆಚ್ಚಗಿರಿಸಲು ರಾತ್ರಿ ಊಟದಲ್ಲಿ ಕೆಲವು ಮಸಾಲೆ ಪದಾರ್ಥಗಳನ್ನು ಸೇವಿಸಿ.
ಉದಾಹರಣೆಗೆ ಬೆಳ್ಳುಳ್ಳಿ, ಅರಿಶಿನದ ಸೇವನೆ ಮಾಡಿ. ನೀವು ಹಾಲಿಗೆ ಚಿಟಿಕೆ ಅರಿಶಿನ ಸೇರಿಸಿ ಸೇವನೆ ಮಾಡಿದರೂ ಕೂಡ ಅದು ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತದೆ.
ಅರಿಶಿನದ ಬಳಕೆ
ಸೋಂಕುಗಳಿಂದ ದೇಹವನ್ನು ರಕ್ಷಿಸಲು ಅರಿಶಿನ ಸಹಾಯ ಮಾಡುತ್ತದೆ. ಹೀಗಾಗಿ ದಿನನಿತ್ಯ ಆಹಾರದಲ್ಲಿ ಅರಿಶಿನವನ್ನು ಬಳಕೆ ಮಾಡುವುದರಿಂದ ಬೆಳಗ್ಗೆ ಸೀನು ಬರುವುದನ್ನು ತಪ್ಪಿಸಬಹುದು.
ಅದಕ್ಕಾಗಿ ನೀವು ಹಾಲಿಗೆ ಅರಿಶಿನ ಹಾಕಿ ಕುಡಿಯಬಹುದು. ಇದರಿಂದ ನಿದ್ದೆಯೂ ಉತ್ತಮವಾಗಿ ಬರುತ್ತದೆ. ಅಥವಾ ಒಂದು ಬಾಣಲೆಗೆ ಒಂದು ಚಮಚ ಅರಿಶಿನವನ್ನು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ, ಅದರಿಂದ ಬರುವ ಬಿಸಿ ಶಾಖವನ್ನು ಮುಖಕ್ಕೆ ಹಿಡಿದು ಸ್ಟೀಮ್ ರೀತಿಯಲ್ಲಿ ಮಾಡಿ. ಇದರಿಂದ ದೇಹದಲ್ಲಿ ಥಂಡಿಯ ಅಂಶವಿದ್ದರೂ ನಿವಾರಣೆಯಾಗುತ್ತದೆ.
ನುಗ್ಗೆ ಸೊಪ್ಪು ಮತ್ತು ಬೆಳ್ಳುಳ್ಳಿ
ಬೆಳಗ್ಗೆ ಕಾಡುವ ಸೀನು ಮತ್ತು ಶೀತಕ್ಕೆ ನುಗ್ಗೆ ಸೊಪ್ಪು ಮತ್ತು ಬೆಳ್ಳುಳ್ಳಿಯ ಸ್ಟೀಮ್ ಅತ್ಯುತ್ತಮ ಮನೆದ್ದಾಗಿದೆ. ಒಂದು ಮುಷ್ಟಿ ನುಗ್ಗೆಸೊಪ್ಪನ್ನು 4 ರಿಂದ 5 ಬೆಳ್ಳುಳ್ಳಿಯೊಂದಿಗೆ ಚೆನ್ನಾಗಿ ಅರೆಯಿರಿ. ನಂತರ ಅದರ ಘಮವನ್ನು ಮೂಗಿನಿಂದ ಎಳೆದುಕೊಳ್ಳಿ.
ಇದರಿಂದ ಕಟ್ಟಿದ ಮೂಗಿನ ಸಮಸ್ಯೆ, ಬೆಳಗ್ಗೆ ಸೀನು ಬರುವುದು ಸೇರಿದಂತೆ ದೇಹದಲ್ಲಿನ ಥಂಡಿಯ ಅಂಶ ನಿವಾರಣೆಯಾಗಿ, ದೇಹ ಆರಾಮವಾಗಿರುತ್ತದೆ.