ಶಿವಮೊಗ್ಗ : ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಜೈಲಿನ ಸಿಬ್ಬಂದಿಗಳೇ ಕಾರ್ಯಾಚರಣೆ ನಡೆಸಿ ಅನೇಕ ನಿಷೇಧಿತ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಗಾಂಜಾ ಸೇರಿದಂತೆ ವಿವಿಧ ನಿಷೇಧಿತ ವಸ್ತುಗಳು ಜೈಲಿನೊಳಗೆ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಸಿಬ್ಬಂದಿ ಇತ್ತೀಚೆಗೆ ರಾತ್ರಿ 8 ಗಂಟೆ ಸುಮಾರಿಗೆ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಪೊಲೀಸರಿಗೆ 3 ಮೊಬೈಲ್ಗಳು, 4 ಸಿಮ್ ಕಾರ್ಡ್ಗಳು, 3 ಡೆಟಾ ಕೇಬಲ್ಗಳು, 2 ಇಯರ್ ಫೋನ್, 1 ಚಾರ್ಜರ್ ಸಿಕ್ಕಿದೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲಿನೊಳಗಿನ ಅಕ್ರಮಗಳನ್ನು ಬಯಲಿಗೆಳೆದ ಜೈಲು ಅಧಿಕಾರಿಗಳ ಕಾರ್ಯವನ್ನು ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮಹಾನಿರ್ದೆಶಕ ಅಲೋಕ್ ಕುಮಾರ್ ಶ್ಲಾಘಿಸಿದ್ದಾರೆ.
ಕರ್ತವ್ಯ ನಿಷ್ಠೆ ತೋರಿದ ತಂಡಕ್ಕೆ ಪ್ರೋತ್ಸಾಹ ದಾಯಕವಾಗಿ 10,000 ರೂ.ಗಳ ನಗದು ಬಹುಮಾನವನ್ನು ಸಹ ಘೋಷಿಸಿದ್ದಾರೆ. ಶಿವಮೊಗ್ಗದ ಮುಖ್ಯ ಜೈಲು ಅಧೀಕ್ಷಕ ರಂಗನಾಥ್ ನೇತೃತ್ವದಲ್ಲಿ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿ ಕಾರಾಗೃಹದ ಕಾವೇರಿ ವಿಭಾಗದಲ್ಲಿ ಅನಿರೀಕ್ಷಿತ ತಪಾಸಣೆಯಲ್ಲಿ ಭಾಗಿಯಾಗಿದ್ದರು.















