ಮನೆ ರಾಜ್ಯ ಶೀಘ್ರವೇ ಮೈ ಶುಗರ್ ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ: ಸಚಿವ ಕೆ.ಗೋಪಾಲಯ್ಯ

ಶೀಘ್ರವೇ ಮೈ ಶುಗರ್ ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ: ಸಚಿವ ಕೆ.ಗೋಪಾಲಯ್ಯ

0

ಮಂಡ್ಯ(Mandya): ಜಿಲ್ಲೆಯ ಜನರ ಜೀವನಾಡಿ ಮೈಷುಗರ್ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಶುಭಗಳಿಗೆ ಕೂಡಿ ಬಂದಿದ್ದು, ಗುರುವಾರ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ. ಗೋಪಾಲಯ್ಯ ಮತ್ತು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಜಂಟಿಯಾಗಿ  ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು.

ನಾಲ್ಕೈದು ವರ್ಷಗಳಿಂದ ಸ್ಥಗಿತಗೊಂಡಿದ್ದ  ಮೈ ಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಸರ್ಕಾರಿ ಸ್ವಾಮ್ಯದಲ್ಲೇ ನಡೆಸಲು ಸರ್ಕಾರ ನಿರ್ಧರಿಸಿತ್ತು. ಅದರಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಲಾಗುತ್ತಿದ್ದು, ಮೊದಲ ಹೆಜ್ಜೆಯಾಗಿ ಇಂದು ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಗಿದೆ‌ ಎಂದು ಸಚಿವ ಕೆ.ಗೋಪಾಲಯ್ಯ ಈ ಸಂದರ್ಭದಲ್ಲಿ ತಿಳಿಸಿದರು.

ಮಂಡ್ಯ ಜನರ ಜೀವನಾಡಿಯಾಗಿರುವ ಮೈಶುಗರ್ ಕಾರ್ಖಾನೆ ತುಕ್ಕುಹಿಡಿಯುವ ಹಂತಕ್ಕೆ ತಲುಪಿತ್ತು. ಹಿಂದಿನ ಸರ್ಕಾರಗಳು ಇದರ ಪುನಶ್ಚೇತನಕ್ಕೆ ಮನಸ್ಸು ಮಾಡಿರಲಿಲ್ಲ. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಂಡ್ಯ ಭಾಗದ ಜನರ ಕನಸುಗಳಿಗೆ, ಭಾವನೆಗಳಿಗೆ ಸ್ಪಂದಿಸಿ ಮೈಶುಗರ್ ಕಾರ್ಖಾನೆಗೆ ಕಾಯಕಲ್ಪ ನೀಡಲಾಗಿದೆ. ಎಲ್ಲರ ಸಹಕಾರದಿಂದ ಇಂದು ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡಲಾಗಿದೆ ಎಂದರು.

ಶೀಘ್ರದಲ್ಲೇ ಕಬ್ಬು ಅರೆಯಲು ಪ್ರಾರಂಭಿಸಿ, ರೈತರಿಗೆ ಅನುವು ಮಾಡಿಕೊಡುತ್ತೇವೆ.  ಫ್ಯಾಕ್ಟರಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವ ಕೆ.ಗೋಪಾಲಯ್ಯ ಅವರು ಹೇಳಿದರು.

ಸಂಸದೆ ಸುಮಲತಾ, ಶಾಸಕ ಶ್ರೀನಿವಾಸ್, ಮಾಜಿ ಪರಿಷತ್ ಸದಸ್ಯ ಶ್ರೀಕಂಠೇಗೌಡ, ಮೈಷುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಎಸ್ ಅಶ್ವಥಿ, ಎಸ್ ಪಿ ಯತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.