ಮಂಗಳೂರು: ಮಂಗಳೂರಿನಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತ ಮತ್ತು ರೌಡಿ ಶೀಟರ್ ಆಗಿದ್ದ ಸುಹಾಸ್ ಶೆಟ್ಟಿ ಅವರ ಭೀಕರ ಹತ್ಯೆ ಪ್ರಕರಣವನ್ನು ಈಗ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆಗೆ ವಹಿಸಿರುವುದಾಗಿ ಕೇಂದ್ರ ಗೃಹ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇ 1ರ ರಾತ್ರಿ, ಮಂಗಳೂರು ಹೊರವಲಯದ ಬಜ್ಜೆ ಪ್ರದೇಶದ ಕಿನ್ನಿಪದವಿ ಬಳಿ ಈ ಭೀಕರ ಕೃತ್ಯ ನಡೆಯಿತ್ತು. ಕಾರಿನಲ್ಲಿ ಬಜ್ಜೆ ಕಡೆ ಹೋಗುತ್ತಿದ್ದ ಸುಹಾಸ್ ಶೆಟ್ಟಿಯ ಮೇಲೆ ಹಿಂದಿನಿಂದ ಬಂದ ದುಷ್ಕರ್ಮಿಗಳ ತಂಡ ವಾಹನ ಅಡ್ಡಹಾಕಿ ಆತನನ್ನು ತಲವಾರುಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಈ ಘಟನೆಯನ್ನು ಪೂರ್ವನಿಯೋಜಿತ ಪ್ಲಾನ್ ಅಂದರೆ ತಪ್ಪಲ್ಲ. ಸ್ಥಳೀಯ ಪೊಲೀಸ್ ತನಿಖೆಯ ಪ್ರಕಾರ, ಕೊಲೆಗೆ ಮುನ್ನ ಸ್ಕೆಚ್ ಹಾಕಲಾಗಿದ್ದು, ದುಷ್ಕರ್ಮಿಗಳು ಆತನ ಚಲನಚಲನಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡಿದ್ದರು.
ಘಟನೆಯ ಗಂಭೀರತೆಯನ್ನು ಹಾಗೂ ಸಾಮಾಜಿಕ ಶಾಂತಿಯ ಮೇಲೆ ಪರಿಣಾಮ ಬೀರುವ ಭೀತಿಯ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಇಲಾಖೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಹಲವು ಹಿಂದೂಪರ ಸಂಘಟನೆಗಳು ಈ ಘಟನೆಗೆ ವಿರೋಧ ವ್ಯಕ್ತಪಡಿಸಿದ್ದವು. ಮೊದಲಿನಿಂದಲೂ ಪ್ರಕರಣವನ್ನು ಎನ್ಐಎಗೆ ವಹಿಸಲು ಒತ್ತಾಯಿಸಲಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಆದೇಶ ಬಂದಿರುವುದರಿಂದ, ಆರೋಪಿಗಳ ಬಂಧನ ಮತ್ತು ಹಿಂದೆ ಇರುವ ಸಂಚುಕಾರಿಗಳ ತನಿಖೆ ಮತ್ತಷ್ಟು ವೇಗ ಪಡೆಯುವ ಸಾಧ್ಯತೆ ಇದೆ.














