ಮನೆ ಅಪರಾಧ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ : ಪರಾರಿಯಾಗಿದ್ದ ಮೂವರು ಆರೋಪಿಗಳು ಇದೀಗ ಪೊಲೀಸ್ ವಶದಲ್ಲಿ!

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ : ಪರಾರಿಯಾಗಿದ್ದ ಮೂವರು ಆರೋಪಿಗಳು ಇದೀಗ ಪೊಲೀಸ್ ವಶದಲ್ಲಿ!

0

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಜಪೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಳವಾರು ನಿವಾಸಿ ಅಜರುದ್ದೀನ್ ಯಾನೆ ಅಜ್ಜು(29), ಬಜಪೆ ನಿವಾಸಿ ಅಬ್ದುಲ್ ಖಾದರ್ ಯಾನೆ ನೌಫಲ್(24), ವಾಮಂಜೂರು ನಿವಾಸಿ ನೌಷದ್ ಯಾನೆ ಚೊಟ್ಟೆ ನೌಷದ್(39) ಬಂಧಿತ ಆರೋಪಿಗಳು.

ಬಂಧಿತ ಆರೋಪಿ ಅಜರುದ್ದೀನ್ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆಯೇ 3 ಕಳವು ಪ್ರಕರಣ ದಾಖಲಾಗಿತ್ತು. ಈತ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿ ನೀಡಿ ಕೊಲೆಗೆ ಸಹಕರಿಸಿದ್ದ ಎನ್ನಲಾಗಿದೆ.

ಆರೋಪಿ ಅಬ್ದುಲ್ ಖಾದರ್ ಕೊಲೆ ಕೃತ್ಯ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗಲು ಸಹಕರಿಸಿದ್ದ. ಇನ್ನೋರ್ವ ಆರೋಪಿ ನೌಷದ್ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿದ್ದ. ನೌಷದ್ ಈ ಹಿಂದೆ ಸುರತ್ಕಲ್, ಬಜ್ಪೆ, ಮೂಡಬಿದ್ರೆ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿತ್ತು.

ಆರೋಪಿ ಅಜರುದ್ದೀನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅಬ್ದುಲ್ ಖಾದರ್ ಹಾಗೂ ನೌಷದ್ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಮೇ 1ರಂದು ಬಜಪೆಯ ಕಿನ್ನಿಪದವು ಬಳಿ ರಾತ್ರಿ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.