ಮಂಗಳೂರು : ಎಸ್‌ಐಟಿ ಕಚೇರಿಯ ಕದ ತಟ್ಟಿದ್ದ ಅನನ್ಯಾ ಭಟ್ ನಕಲಿ ಸೃಷ್ಟಿಕರ್ತೆ ಸುಜಾತ ಭಟ್ ಎಸ್‌ಐಟಿ ವಿಚಾರಣೆ ಎದುರಿಸಿದ್ದಾರೆ. ತನಿಖಾಧಿಕಾರಿ ಇಲ್ಲದಿದ್ದ ಕಾರಣ ಪ್ರಾಥಮಿಕ ತನಿಖೆ ನಡೆಸಿ ಕಳುಹಿಸಲಾಗಿದೆ. ಇಂದು ಮತ್ತೆ ವಿಚಾರಣೆಗೆ ಹಾಜರಾಗಲು ಎಸ್‌ಐಟಿ ಅಧಿಕಾರಿಗಳು ಸೂಚಿಸಿದ್ದು, ಇಂದು ಮ್ಯಾಜಿಕ್ ಅಜ್ಜಿಯ ಗ್ರಿಲ್ ನಡೆಯಲಿದೆ.
ಧರ್ಮಸ್ಥಳದಲ್ಲಿ ಅನನ್ಯಾ ಭಟ್ ನಾಪತ್ತೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ನಸುಕಿನ ಜಾವ 5 ಗಂಟೆಗೆ ದೂರುದಾರೆ ಸುಜಾತ ಭಟ್ ಎಸ್‌ಐಟಿ ಬಾಗಿಲು ಬಡಿದಿದ್ದಾರೆ. ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಇಬ್ಬರು ವಕೀಲರ ಜೊತೆ ಎಸ್‌ಐಟಿ ಅಧಿಕಾರಿಗಳು ನಿದ್ದೆಯಲ್ಲಿದ್ದಾಗ ಹಾಜರಾಗಿದ್ದಾರೆ.
ಈ ವಿಚಾರಣೆಗೆ ಸಮಾಯಾವಕಾಶ ಕೇಳಿದ್ದ ಸುಜಾತ ಆಗಸ್ಟ್ 29ಕ್ಕೆ ಬರ್ತೇನೆ ಅಂತ ಪತ್ರ ಬರೆದಿದ್ದರು. ಆದರೆ, ನಸುಕಿನ ಜಾವ ದಿಢೀರ್ ಅಂತ ಎಸ್‌ಐಟಿ ಕಚೇರಿ ಮುಂದೆ ಹಾಜರಾಗಿದ್ರು. ಸುಮಾರು 6 ಗಂಟೆಗಳ ಕಾಲ ಸುಜಾತ ಭಟ್ ವಿಚಾರಣೆ ಎದುರಿಸಿದರು.
ಮಂಗಳವಾರ ಅಲ್ಪಮಟ್ಟಿಗೆ ವಿಚಾರಣೆ ಎದುರಿಸಿರೋ ಸುಜಾತಾ ಭಟ್‌ಗೆ ಇಂದು ಕೂಡ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ತನಿಖಾಧಿಕಾರಿ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸುಜಾತ್ ಭಟ್‌ರನ್ನು ವಿಚಾರಣೆ ನಡೆಸಲಿದ್ದಾರೆ.
ಸುಜಾತ ಭಟ್ ಹೆಣೆದಿರೋ ಕಥೆಗೆ ಸಂಬಂಧಿಸಿದ ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಸಾಕಷ್ಟು ಮಾಹಿತಿ ಸಂಗ್ರಹಿಸಿಟ್ಟಿದ್ದರು. ಎಲ್ಲವನ್ನೂ ವಿಚಾರಣೆ ವೇಳೆ ಸುಜಾತ ಭಟ್ ಮುಂದಿಡಲು ಎಸ್‌ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಒಟ್ಟಿನಲ್ಲಿ ಸುಜಾತ ಭಟ್ ಮತ್ಯಾವ ಟ್ವಿಸ್ಟ್ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.















