ಮನೆ ಸುದ್ದಿ ಜಾಲ ಬೇಸಿಗೆ ಶಿಬಿರಗಳು ಮಕ್ಕಳ ನೈಪುಣ್ಯತೆಯ ಕನ್ನಡಿಯಾಗಬೇಕು: ಅಡ್ಡಂಡ ಕಾರ್ಯಪ್ಪ

ಬೇಸಿಗೆ ಶಿಬಿರಗಳು ಮಕ್ಕಳ ನೈಪುಣ್ಯತೆಯ ಕನ್ನಡಿಯಾಗಬೇಕು: ಅಡ್ಡಂಡ ಕಾರ್ಯಪ್ಪ

0

ಮೈಸೂರು(Mysuru): ಬೇಸಿಗೆ ಶಿಬಿರಗಳು ಮಕ್ಕಳಲ್ಲಿರಬಹುದಾದ ಪ್ರತಿಭಾ ಸಾಮರ್ಥ್ಯದ ನೈಪುಣ್ಯತೆಗೆ ಕನ್ನಡಿಯಾಗಬೇಕು ಎಂದು ರಂಗಾಯಣ(Rangayana) ನಿರ್ದೇಶಕ(Director) ಅಡ್ಡಂಡ ಕಾರ್ಯಪ್ಪ(Addanda Karyappa) ಹೇಳಿದರು.

ನಗರದ ಆರ್.ಟಿ.ನಗರದಲ್ಲಿ ನೂತನವಾಗಿ ಆರಂಭವಾಗಿರುವ ‘ನೈಪುಣ್ಯ ಸ್ಕೂಲ್ ಆಫ್ ಎಕ್ಸೆಲೆನ್ಸ್ ‘ಶಾಲೆ ಹಮ್ಮಿಕೊಂಡಿರುವ ‘ಬೇಸಿಗೆ ಬಂಡಿ’ಹೆಸರಿನ ಬೇಸಿಗೆ ಶಿಬಿರಕ್ಕೆ ಇಂದು ಮಕ್ಕಳ ಜಾನಪದ ಮೆರವಣಿಗೆ ಉದ್ಘಾಟಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿ, ಬೇಸಿಗೆ ಶಿಬಿರಗಳು ನಮ್ಮ ದೇಸಿಯ ಸಂಸ್ಕೃತಿ ಹಾಗೂ ಕ್ರೀಡೆಗಳನ್ನು ಪರಿಚಯಿಸಬೇಕೆಂದು ಹೇಳಿದರು.

ಪಟ್ಟಣ ಪ್ರದೇಶಗಳಲ್ಲಿ ಬೇಸಿಗೆ ಶಿಬಿರಗಳೂ ಸಹ ವಾಣಿಜ್ಯ ಸ್ಪರ್ಶ ಪಡೆಯುತ್ತಿದ್ದು, ಸಂಸ್ಕೃತಿ, ಸಂಪ್ರದಾಯ ಉತ್ತೇಜಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡುವ ಚಟುವಟಿಕೆಗಳಿಗೆ ಹೆಚ್ಚು ಆಸ್ಪದ ನೀಡಬೇಕಿದೆ. ಈ ನಿಟ್ಟಿನಲ್ಲಿ ನೈಪುಣ್ಯ ವಿದ್ಯಾಸಂಸ್ಥೆ ಯಾವುದೇ ಶುಲ್ಕ ಪಡೆಯದೇ ಈ ಬಾರಿ ಉಚಿತವಾಗಿ ಬೇಸಿಗೆ ಬಂಡಿ ಹೆಸರಿನಲ್ಲಿ 20 ದಿನಗಳ ಶಿಬಿರ ಏರ್ಪಡಿಸಿರುವುದು ನಿಜಕ್ಕೂ ಅಭಿನಂದನೀಯ ಕಾರ್ಯವಾಗಿದೆ ಎಂದು ಹೇಳಿದರು.

ಶಿಬಿರದಲ್ಲಿ ನಮ್ಮ ಜನಪದ ಕಲೆ, ಸಂಸ್ಕೃತಿ, ರಂಗಕಲೆ ,ಗ್ರಾಮೀಣ ಬದುಕಿನ ಪರಿಚಯ ಹಾಗೂ ಸಾಹಸ ಕ್ರೀಡೆಗಳು ಹಾಗೂ ಮಕ್ಕಳ ಪ್ರತಿಭೆ ಅನಾವರಣಕ್ಕೆ ರೂಪಿಸಿರುವ ಕಾರ್ಯಕ್ರಮಗಳು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಕಾರ್ಯಪ್ಪ ಶ್ಲಾಘಿಸಿದರು.

ಕುವೆಂಪುನಗರದ ಕುವೆಂಪು ಪ್ರತಿಮೆ ಬಳಿಯಿಂದ ಆರಂಭವಾದ ಇಂದಿನ ಮೆರವಣಿಗೆ ಜನಪದ ದಿಬ್ಬಣ್ಣವನ್ನು ನೆನಪಿಸುವ ರೀತಿಯಲ್ಲಿ ಎತ್ತಿನ ಗಾಡಿಗಳಲ್ಲಿ ಮಕ್ಕಳು ವಿವಿಧ ಗ್ರಾಮೀಣ ಪ್ರದೇಶದ ಉಡುಗೆ-ತೊಡುಗೆ ತೊಟ್ಟು ಪ್ರಯಾಣಿಸಿದರು. ವಿವಿಧ ಜನಪದ ತಂಡಗಳು ಹಾಗೂ ವಾದ್ಯಮೇಳಗಳೊಂದಿಗೆ ಮೆರವಣಿಯು ಕುವೆಂಪುನಗರ ಹಾಗೂ ರಾಮಕೃಷ್ಣನಗರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರವೀಂದ್ರನಾಥ ಟ್ಯಾಗೂರ್ ನಗರ ತಲುಪಿತು. ಶಿಬಿರದ ಮೊದಲದಿನ ಮಕ್ಕಳಿಗಾಗಿ ಕೆಲವು ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.