ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಮುಖ ಚುನಾವಣಾ ತಂತ್ರಗಾರರಾಗಿ ಗುರುತಿಸಿಕೊಂಡಿರುವ ಸುನೀಲ್ ಕನುಗೋಳು ಅವರನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುಖ್ಯ ಸಲಹೆಗಾರರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಬಳ್ಳಾರಿ ಮೂಲದ ಸುನೀಲ್ ಕನುಗೋಳು ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಈ ಮೂಲಕ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸುನೀಲ್ ಕನುಗೋಳು ಅವರನ್ನು ತಮ್ಮ ಮುಖ್ಯ ಸಲಹೆಗಾರರಾಗಿ ನೇಮಿಸಿಕೊಂಡಿದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ನಡೆದ ‘ಪೇಸಿಎಂ’ ಅಭಿಯಾನ ಹಾಗೂ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಉಚಿತ ಗ್ಯಾರಂಟಿ ಯೋಜನೆಗಳ ಹಿಂದಿನ ಪ್ರಮುಖ ತಂತ್ರಗಾರ ಸುನೀಲ್ ಕನುಗೋಳು ಎಂದು ಪರಿಗಣಿಸಲಾಗಿದೆ.

ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅಗತ್ಯವಾದ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಆಡಳಿತಾತ್ಮಕ ಕ್ಷೇತ್ರದಲ್ಲಿಯೂ ಮುಖ್ಯಮಂತ್ರಿ ಅವರಿಗೆ ಮುಖ್ಯ ಸಲಹೆಗಾರರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.














